ಖರೀದಿಗೆ ಕಡ್ಡಾಯವಾಗಿ ರಸೀದಿ ನೀಡಿ : ವಾಸುದೇವ ಎಂ.ಸ್ವಾಮಿ

0
Agricultural Equipment Dealers' Meeting
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಕೃಷಿ ಪರಿಕರ ಮಾರಾಟಗಾರರು ಕಡ್ಡಾಯವಾಗಿ ತಮ್ಮ ಅಂಗಡಿಗಳಲ್ಲಿ ಗೊಬ್ಬರದ ದಾಸ್ತಾನು, ದರಪಟ್ಟಿ ಪ್ರಕಟಿಸಬೇಕು ಮತ್ತು ರೈತರು ಖರೀದಿಸಿದ ರಸಗೊಬ್ಬರ, ಬೀಜ, ಕ್ರಿಮಿನಾಶಕ ಸೇರಿ ಇತರೇ ಕೃಷಿ ಸಾಮಗ್ರಿಗಳಿಗೆ ಕಡ್ಡಾಯವಾಗಿ ರಸೀದಿ ಕೊಡಬೇಕು ಎಂದು ತಹಸೀಲ್ದಾರ ವಾಸುದೇವ ಎಂ.ಸ್ವಾಮಿ ಹೇಳಿದರು.

Advertisement

ಅವರು ಬುಧವಾರ ಪಟ್ಟಣದ ತಾ.ಪಂ ಸಭಾಂಗಣದಲ್ಲಿ ಕೃಷಿ ಇಲಾಖೆಯ ವತಿಯಿಂದ ತಾಲೂಕಿನ ಕೃಷಿ ಪರಿಕರ (ರಸಗೊಬ್ಬರ, ಬೀಜ, ಕೀಟನಾಶಕ) ಮಾರಾಟಗಾರರ ಗುಣ ನಿಯಂತ್ರಣದ ಬಗ್ಗೆ ತಿಳುವಳಿಕೆ ಮತ್ತು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಕರೆದಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ವೇಳೆ ಸಹಾಯಕ ಕೃಷಿ ನಿರ್ದೇಶಕ(ಜಾರಿದಳ) ರಾಘವೇಂದ್ರ ಬೊಮ್ಮಿಗಟ್ಟಿ ಮಾತನಾಡಿ, ಈ ಬಾರಿ ಹಿಂಗಾರು ಹಂಗಾಮಿನಲ್ಲಿ ಕೊಂಚ ತಡವಾದರೂ ಉತ್ತಮ ಮಳೆಯಾಗಿದೆ. ಲಕ್ಷ್ಮೇಶ್ವರ ತಾಲೂಕಿನಲ್ಲಿ ಹಿಂಗಾರಿ ಹಂಗಾಮಿಗೆ ಒಟ್ಟು 33 ಸಾವಿರ ಹೆಕ್ಟೇರ್ ಕ್ಷೇತ್ರದಲ್ಲಿ ಬಿತ್ತನೆಯಾಗಲಿದ್ದು, ಅದರಲ್ಲಿ ಶೇ.90ರಷ್ಟು ಕ್ಷೇತ್ರದಲ್ಲಿ ಕಡಲೆ ಬಿತ್ತನೆಯಾಗಲಿದೆ. ಈಗಾಗಲೇ ಕೆಲ ರೈತರು ಕೃಷಿ ಇಲಾಖೆ ಮತ್ತು ಕೃಷಿ ಪರಿಕರ ಮಾರಾಟಗಾರರಿಂದ ಬೀಜ, ಗೊಬ್ಬರ ಖರೀದಿಸಿಟ್ಟುಕೊಂಡಿದ್ದಾರೆ. ಉತ್ತಮ ಮಳೆಯಾಗಿದ್ದರಿಂದ ರಸಗೊಬ್ಬರದ ಬೇಡಿಕೆ ಹೆಚ್ಚಲಿದೆ.

ರೈತರಿಗೆ ಡಿಎಪಿ ಗೊಬ್ಬರದ ಬದಲಾಗಿ ಸಾರಜನಕ, ರಂಜಕ, ಪೋಟ್ಯಾಷ್ ಯುಕ್ತ ಕಾಂಪ್ಲೆಕ್ಸ್ ಗೊಬ್ಬರ ಬಳಸುವಂತೆ ತಿಳುವಳಿಕೆ ಮತ್ತು ಮನವರಿಕೆ ಮಾಡಿಕೊಡಬೇಕು.

ಸಭೆಯ ಬಳಿಕ ಕೃಷಿ ಪರಿಕರ ಮಾರಾಟದ ಅಂಗಡಿಗಳಿಗೆ ಬೇಟಿ ನೀಡಿ ಪರಿಶೀಲಿಸಿ ಸಲಹೆ-ಸೂಚನೆ ನೀಡಲಾಯಿತು. ಗುಣಮಟ್ಟ ಪರೀಕ್ಷೆಗಾಗಿ ಪರಿಕರಗಳನ್ನು ಸ್ಯಾಂಪಲ್ ಪಡೆಯಲಾಯಿತು. ಈ ವೇಳೆ ತಾ.ಪಂ ಇಓ ಕೃಷ್ಣಪ್ಪ ಧರ್ಮರ, ತಾಲೂಕು ಸಹಾಯಕ ಕೃಷಿ ನಿರ್ದೇಶಕ ರೇವಣಪ್ಪ ಬಿಸನಳ್ಳಿ, ಕೃಷಿ ಅಧಿಕಾರಿ ಚಂದ್ರಶೇಕರ ನರಸಮ್ಮನವರ, ಕೃಷಿ ಮಾರಾಟಗಾರರ ಸಂಘದ ಅಧ್ಯಕ್ಷ ಅಶೋಕ ಬಟಗುರ್ಕಿ ಸೇರಿ ಮಾರಾಟಗಾರರು ಇದ್ದರು.

ಮಾರಾಟಗಾರರು ಗೌಪ್ಯವಾಗಿ ರಸಗೊಬ್ಬರ ಸಂಗ್ರಹಿಸಿ, ಹೆಚ್ಚಿನ ದರದಲ್ಲಿ ಮಾರಾಟ ಮಾಡುವ ಬಗ್ಗೆ ಮಾಹಿತಿ ಬಂದರೆ ಅಂತವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಲೈಸನ್ಸ್ ನವೀಕರಣಗೊಳಿಸಿ ಅಧಿಕೃತ ಡೀಲರ್‌ಗಳಿಂದ ಬೀಜ, ಗೊಬ್ಬರ ಖರೀದಿಸಿ ನಿಗದಿತ ದರದಲ್ಲಿ ಮಾರಾಟ ಮಾಡಬೇಕು ಎಂದು ರಾಘವೇಂದ್ರ ಬೊಮ್ಮಿಗಟ್ಟಿ ಸೂಚಿಸಿದರು.

 


Spread the love

LEAVE A REPLY

Please enter your comment!
Please enter your name here