ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಶ್ರೀಮದ್ ರಂಭಾಪುರಿ ಜಗದ್ಗುರುಗಳ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ನಿಮಿತ್ತ ಸಮೀಪದ ಅಬ್ಬಿಗೇರಿಯಲ್ಲಿ ರೋಣ ಕೃಷಿ ಇಲಾಖೆಯ ಸಹಯೋಗದಲ್ಲಿ ನಡೆದ ಕೃಷಿ ಮೇಳವನ್ನು ಯಡೆಯೂರು ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು.
ಈವೇಳೆ ಸಿದ್ದರಬೆಟ್ಟ, ಅಬ್ಬಿಗೇರಿ ಹಿರೇಮಠದ ಶ್ರೀ ವಿರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕೃಷಿ ಪ್ರಧಾನವಾಗಿರುವ ಈ ಭಾಗದ ರೈತರಿಗೆ ಕೃಷಿಯ ಬಗ್ಗೆ ಮಾಹಿತಿ ಹಾಗೂ ವಿನೂತನ ಯಂತ್ರೋಪಕರಣಗಳ ಬಗ್ಗೆ ಮಾಹಿತಿಗಾಗಿ ದಸರಾ ಧರ್ಮ ಸಮ್ಮೇಳನದಲ್ಲಿ ಕೃಷಿ ಮೇಳ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಇಳುವರಿ ಪಡೆಯಬೇಕೆಂಬ ಉದ್ದೇಶ ಹಾಗೂ ಗೊಬ್ಬರ, ಕೀಟನಾಶಕ ಹಾಗೂ ಇನ್ನಿತರ ವಿಷಕಾರಿ ರಾಸಾಯನಿಕಗಳನ್ನು ಕೃಷಿ ಬೆಳೆಗಳಿಗೆ ಬಳಕೆ ಮಾಡುತ್ತಿರುವುದರಿಂದ ಸತ್ವಹೀನ ಕೃಷಿ ಉತ್ಪನ್ನಗಳು ಮನುಷ್ಯನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮಗಳನ್ನು ಬೀರುತ್ತಿವೆ. ಸಿರಿಧಾನ್ಯ ಬೆಳೆಯುವುದರ ಮುಖಾಂತರ ಆರೋಗ್ಯವಂತ ಸಮಾಜ ನಿರ್ಮಿಸಲು ಸಾಧ್ಯವಾಗುತ್ತದೆ. ಎಲ್ಲ ರೈತರು ಕೃಷಿ ಮೇಳದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಅಬ್ಬಿಗೇರಿ ಕೃಷಿಮೇಳದಲ್ಲಿ 15ಕ್ಕೂ ಹೆಚ್ಚಿನ ಮಳಿಗೆಗಳಲ್ಲಿ ಕೃಷಿ ವಸ್ತುಗಳ ಪ್ರದರ್ಶನ, ಟ್ರ್ಯಾಕ್ಟರ್, ರೊಟವೇಟರ್, ಬಿತ್ತುವ ಕೂರಿಗೆ, ನೇಗಿಲು, ಸ್ಪ್ರಿಂಕ್ಲರ್ ಪೈಪ್, ಹೊಸ ತಳಿಯ ಬಿತ್ತನೆ ಬೀಜಗಳ ಪ್ರದರ್ಶನ ಸೇರಿದಂತೆ ಹಲವಾರು ಕೃಷಿ ಉಪಕರಣಗಳನ್ನು ವೀಕ್ಷಿಸಲು ರೈತರು ಆಗಮಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ರೋಣ ಕೃಷಿ ಇಲಾಖೆ ಉಪನಿರ್ದೇಶಕ ಪಾಲಕ್ಷಗೌಡ, ಕೃಷಿ ಅಧಿಕಾರಿಗಳಾದ ಸಾವಿತ್ರಿ ಶಿವನಗೌಡ, ಬಸವರಾಜ, ಸಿ.ಕೆ. ಕಮ್ಮಾರ, ಶಿವಪುತ್ರಪ್ಪ ದೊಡ್ಡಮನಿ, ಮಂಜುನಾಥ ಬೀಳಗಿ, ಶಿವಾನಂದ ಅರಹುಣಶಿ, ಬಸವರಾಜ ಪಲ್ಲೇದ, ಎಂ.ಎಸ್. ಧಡೇಸೂರಮಠ, ಸುರೇಶ ನಾಯ್ಕರ್, ಸಂಗಪ್ಪ ಕುಂಬಾರ, ಮಂಜುನಾಥ ಅಂಗಡಿ, ಸುರೇಶ ಬಸವರಡ್ಡೇರ, ಪ್ರಕಾಶ ಜಕರಡ್ಡಿ ಸೇರಿದಂತೆ ಸುತ್ತಮುತ್ತಲಿನ ರೈತರು ಭಾಗವಹಿಸಿದ್ದರು.
ರೋಣ ಕೃಷಿ ಇಲಾಖೆ ಸಹಾಯಕ ಉಪ ನಿರ್ದೇಕ ರವೀಂದ್ರಗೌಡ ಪಾಟೀಲ ಮಾತನಾಡಿ, ಬೇಳೆ ಕಾಳು, ಎಣ್ಣೆಕಾಳು, ಕಿರುಧಾನ್ಯ, ತರಕಾರಿ, ಹಣ್ಣು ಮೊದಲಾದವುಗಳ ಮೌಲ್ಯವರ್ಧನೆಯ ನಿಟ್ಟಿನಲ್ಲಿ ರೈತರು ಗಮನ ಹರಿಸಬೇಕು. ನ್ಯಾನೋ ಯೂರಿಯಾ, ನ್ಯಾನೋ ಡಿಎಪಿ ಬಳಕೆ ಮಾಡಬೇಕು. ಯಾವುದೇ ಬೆಳೆ ಬಿತ್ತುವ ಮುನ್ನ ಬಿಜೋಪಚಾರ ಮಾಡಿ ಬಿತ್ತನೆ ಮಾಡಬೇಕು. ಅಂದರೆ ಬೆಳೆಗೆ ರೋಗ ಅಂಟುವಿಕೆ ಕಡಿಮೆ ಆಗುತ್ತದೆ. ಸಿರಿಧಾನ್ಯದಿಂದ ರೋಗ ಮುಕ್ತರಾಗಲು ಸಾಧ್ಯ ಎಂದರು.