ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ : ರೈತರಿಗೆ ಉತ್ತಮ ಗುಣಮಟ್ಟದ ರಸಗೊಬ್ಬರ, ಬಿತ್ತನೆ ಬೀಜ, ಕೀಟನಾಶಕಗಳನ್ನು ಸರಿಯಾಗಿ ಒದಗಿಸಿ ಎಂದು ತಹಸೀಲ್ದಾರ್ ಬಿ.ವಿ. ಗಿರೀಶ್ ಬಾಬು ಸೂಚಿಸಿದರು.
ಪಟ್ಟಣದ ಕೃಷಿ ಇಲಾಖೆಯ ಸಭಾಂಗಣದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಕೃಷಿ ಪರಿಕರ ಮಾರಾಟಗಾರರ ಸಭೆ ಹಾಗೂ ಸುರಕ್ಷಿತ ಕೀಟನಾಶಕ ತರಬೇತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಂಗಡಿ ಮಾಲೀಕರು ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಹಣವನ್ನು ವಸೂಲಿ ಮಾಡಿದ್ದು ಕಂಡುಬಂದಲ್ಲಿ ಅಂತಹ ಅಂಗಡಿಗಳ ಪರವಾನಿಗೆಯನ್ನು ರದ್ದುಗೊಳಿಸಲಾಗುವುದು. ಬೀಜ, ಗೊಬ್ಬರ, ಕೀಟನಾಶಕಗನ್ನು ಖರೀದಿಸಿದ ರೈತರಿಗೆ ಕಡ್ಡಾಯವಾಗಿ ರಸಿದಿಯನ್ನು ನೀಡಬೇಕು. ಅಂಗಡಿಯ ಹೊರಗಡೆ ರೈತರಿಗೆ ಕಾಣುವಂತೆ ಸರ್ಕಾರ ನಿಗದಿಪಡಿಸಿರುವ ದರಪಟ್ಟಿಯನ್ನು ಅಂಟಿಸಿರಬೇಕು ಎಂದರು.
ಕಳಪೆ ರಸಗೊಬ್ಬರ, ನಿಗದಿತ ಅವಧಿ ಕೊನೆಗೊಂಡ ಬೀಜಗಳ ಮಾರಾಟಗಳನ್ನು ಮಾಡುವುದು ಕಂಡುಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಸಹಾಯಕ ನಿರ್ದೇಶಕ ವಿ.ಸಿ. ಉಮೇಶ್ ಎಚ್ಚರಿಕೆ ನೀಡಿದರು.
ಗ್ರಾಮೀಣ ಪ್ರದೇಶದಲ್ಲಿ ರಸಗೊಬ್ಬರ ಅಂಗಡಿ ಮಾಲೀಕತ್ವ ಹೊಂದಿರುವವರು ಗ್ರಾಮ ಪಂಚಾಯಿತಿಯಿಂದ ಕಡ್ಡಾಯವಾಗಿ ಪರವಾನಿಗೆಗಳನ್ನು ಮರುನೊಂದಾವಣೆ ಮಾಡಿಕೊಳ್ಳಿ, ಇಲ್ಲವಾದಲ್ಲಿ ಪರವಾನಿಗೆಯನ್ನು ನಿಷ್ಕಿçಯಗೊಳಿಸಲಾಗುವುದು ಎಂದು ತಾ.ಪಂ ಮುಖ್ಯ ಕಾರ್ಯನಿರ್ವಾಹಕ ವೈ.ಹೆಚ್. ಚಂದ್ರಶೇಖರ್ ತಿಳಿಸಿದರು.