ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಿ : ಡಾ. ಎಸ್.ಎಸ್. ಅಂಗಡಿ

0
``Agricultural Scientists' Walk Towards Farmers'' is an interaction program with farmers
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ : ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ ಈಗಾಗಲೇ ರೋಣ ಮತ್ತು ಗಜೇಂದ್ರಗಡ ತಾಲೂಕಿನ ಹೊಲಗಳನ್ನು ಸಮೀಕ್ಷೆ ಮಾಡಲಾಗಿದೆ. ಇಲ್ಲಿ ಫಲವತ್ತಾದ ಭೂಮಿ ಇರುವದರಿಂದ ರೈತರು ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ವ್ಯವಸಾಯ ಮಾಡಬೇಕು ಎಂದು ಧಾರವಾಡದ ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ. ಎಸ್.ಎಸ್. ಅಂಗಡಿ ಹೇಳಿದರು.

Advertisement

ಪಟ್ಟಣದ ರೋಟರಿ ಭವನದಲ್ಲಿ ಕೃಷಿ ವಿಶ್ವವಿದ್ಯಾಲಯ ಧಾರವಾಡ, ಐ.ಸಿ.ಎ.ಆರ್ ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರ ಹುಲಕೋಟಿ, ಕೃಷಿ ಇಲಾಖೆ ಗದಗ, ನರೇಗಲ್ ಅಗ್ರಿ ಸ್ವರಾಜ್ ರೈತ ಉತ್ಪಾದಕರ ಕಂಪನಿ, ಸಮೃದ್ಧಿ ತೋಟಗಾರಿಕೆ ರೈತ ಉತ್ಪಾದಕ ಕಂಪನಿ ಹಾಗೂ ರೈತ ಸಂಪರ್ಕ ಕೇಂದ್ರದ ವತಿಯಿಂದ ಜರುಗಿದ `ಕೃಷಿ ವಿಜ್ಞಾನಿಗಳ ನಡಿಗೆ ರೈತರ ಕಡೆಗೆ’ ರೈತರೊಂದಿಗಿನ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಕ್ಷೇತ್ರದ ರೈತರು ತಮ್ಮ ಜಮೀನಿನ ಮಣ್ಣಿನ ಪರೀಕ್ಷೆ ಮಾಡಿಸಿ ವ್ಯವಸಾಯ ಮಾಡಿದರೆ ಲಾಭ ಗಳಿಸಬಹುದು. ಪ್ರಸ್ತುತ ದಿನಗಳಲ್ಲಿ ವ್ಯವಸಾಯ ನಶಿಸುತ್ತಿದೆ. ಇದಕ್ಕೆ ಮಳೆಯ ಅಭಾವ, ಬೆಳೆಗೆ ಬೆಲೆ ಸಿಗದಿರುವುದು ಸೇರಿದಂತೆ ಮಣ್ಣಿನ ಫಲವತ್ತತೆ ಹಾಗೂ ಮಾನವ ಸಂಪನ್ಮೂಲದ ಕೊರತೆ ಕಾರಣವಾಗಿದೆ. ರೈತರು ಕೃಷಿ ಇಲಾಖೆ ನೀಡುವ ಮಾರ್ಗದರ್ಶನದಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಮಣ್ಣಿನ ಗುಣಕ್ಕೆ ತಕ್ಕಂತೆ ಬೆಳೆ ಬೆಳೆದರೆ ಖಂಡಿತ ಲಾಭ ಗಳಿಸಬಹುದು. ರೈತರು ಹಳೆ ವ್ಯವಸಾಯ ಪದ್ಧತಿ ಕೈಬಿಡಬೇಕಿದೆ. ರಾಸಾಯನಿಕ ಗೊಬ್ಬರದ ಬದಲಾಗಿ ಸಾವಯವ ಗೊಬ್ಬರ ಬಳಕೆಯಿಂದ ಲಾಭದ ಜತೆಗೆ ಮಣ್ಣಿನ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.

ಈ ಸಂದರ್ಭದಲ್ಲಿ ಕೃಷಿ ವಿಜ್ಞಾನಿಗಳು ಹಾಗೂ ರೈತರಿಗೆ ಸಂವಾದ ಕಾರ್ಯಕ್ರಮ ಜರುಗಿತು. ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಪಿ.ಎಲ್. ಪಾಟೀಲ, ಕೃಷಿ ಪಂಡಿತ ಗುರುನಾಥ ಓದುಗೌಡ್ರ, ವಿಜಯಪುರದ ಸಹ ಸಂಶೋಧನಾ ನಿರ್ದೇಶಕ ಡಾ. ಅಶೋಕ ಸಜ್ಜನ, ಸಹ ವಿಸ್ತರಣಾ ನಿರ್ದೇಶಕ ಡಾ. ಆರ್.ಬಿ. ಬೆಳ್ಳಿ, ಕೃಷಿ ಇಲಾಖೆಯ ಉಪನಿರ್ದೇಶಕ-2 ಬಿ.ಆರ್. ಪಾಲಾಕ್ಷಗೌಡ, ಕೆ.ವಿ.ಕೆ ವಿಜ್ಞಾನಿ ಡಾ. ಸುಧಾ ಮಂಕಣಿ, ಬೆಳವಟಗಿ ಕೃ.ಸಂ ಕೇಂದ್ರದ ಮುಖ್ಯಸ್ಥ ಡಾ. ಸಿ.ಎಂ. ರಫಿ, ಕೃಷಿ ವಿಜ್ಞಾನಿಗಳಾದ ಡಾ. ಸಿ.ಆರ್. ಪಾಟೀಲ, ಡಾ. ಎಂ.ಡಿ. ಪಾಟೀಲ, ಡಾ. ಬಿ.ಎನ್. ಮೊಟಗಿ, ಡಾ. ಸಂಗಶೆಟ್ಟಿ ಭಾಲ್ಕುಂದೆ, ಡಾ. ವಿನಾಯಕ ನಿರಂಜನ, ಶಿವಲಿಂಗಪ್ಪ ಹೊಟ್ಕರ್ ರೋಣ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರವಿಂದ್ರಗೌಡ ಪಾಟೀಲ, ರೈತ ಸಂಪರ್ಕ ಕೇಂದ್ರ ಅಧಿಕಾರಿ ಸಿ.ಕೆ. ಕಮ್ಮಾರ, ಪ್ರಗತಿಪರ ರೈತರಾದ ಮಲ್ಲಣ್ಣ ಮೇಟಿ, ಗಿರೀಶಗೌಡ ಪಾಟೀಲ, ಶಿವಣ್ಣ ಸೂಡಿ, ಎ.ಆರ್. ಮಲ್ಲನಗೌಡ್ರ, ರಮೇಶ ಕುಲಕರ್ಣಿ, ಸುನೀಲ ಬಸವರಡ್ಡೆರ, ಮುತ್ತಣ್ಣ ಬೂದಿಹಾಳ, ಡಾ. ಕೆ.ಬಿ. ಧನ್ನೂರ, ಎಸ್.ಎ. ಪಾಟೀಲ, ಶರಣಪ್ಪ ಧರ್ಮಾಯತ ಸೇರಿದಂತೆ ನರೇಗಲ್, ರೋಣ ಮತ್ತು ಹೊಳೆ ಆಲೂರ ಹೋಬಳಿಯ ರೈತರು ಪಾಲ್ಗೊಂಡಿದ್ದರು.

ಗದಗ ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕಿ ಜಿ.ಎಚ್. ತಾರಾಮಣಿ ಮಾತನಾಡಿ, ರೈತರು ರಸಗೊಬ್ಬರಕ್ಕಾಗಿ ಹೆಚ್ಚು ಅಲೆದಾಟ ನಡೆಸದೆ ನ್ಯಾನೋ ಯೂರಿಯಾ ದ್ರಾವಣವನ್ನು ಬಳಸಬೇಕು. ನ್ಯಾನೊ ಯೂರಿಯಾ ದ್ರಾವಣವನ್ನು ಬಳಸುವುದರಿಂದ ಉತ್ತಮ ಇಳುವರಿಯನ್ನು ಪಡೆಯಬಹುದು. ನ್ಯಾನೊ ಯೂರಿಯಾ ದ್ರಾವಣವು ಪ್ರತಿಶತ 4ರಷ್ಟು ನ್ಯಾನೊ ಸಾರಜನಕ ಕಣಗಳನ್ನು ಹೊಂದಿದೆ. 500 ಮಿ.ಲೀ ನ್ಯಾನೊ ಯೂರಿಯಾ ಒಂದು ಚೀಲ ಯೂರಿಯಾ ರಸಗೊಬ್ಬರಕ್ಕೆ ಸಮಾನಾಗಿದೆ. ನ್ಯಾನೊ ಡಿ.ಎ.ಪಿ (ಕಾಂಪ್ಲೆಕ್ಸ) ಗೊಬ್ಬರವನ್ನು ಹೆಚ್ಚಾಗಿ ಬಳಸಿದರೆ ರೈತರು ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಾಗುತ್ತದೆ ಎಂದರು.


Spread the love

LEAVE A REPLY

Please enter your comment!
Please enter your name here