ಮೈಸೂರು: ರಾಜ್ಯದ ಕಾರಾಗೃಹಗಳಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳನ್ನು ಪತ್ತೆಹಚ್ಚುವ ಉದ್ದೇಶದಿಂದ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಆಧರಿತ ಸಿಸಿ ಕ್ಯಾಮರಾ ವ್ಯವಸ್ಥೆ ಅಳವಡಿಸಲಾಗುವುದು ಎಂದು ಕರ್ನಾಟಕ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಮಹಾನಿರ್ದೇಶಕ (ಡಿಜಿಪಿ) ಅಲೋಕ್ ಕುಮಾರ್ ತಿಳಿಸಿದ್ದಾರೆ.
ನಗರದ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೊದಲ ಹಂತದಲ್ಲಿ ಮೈಸೂರು, ಬೆಂಗಳೂರು, ಕಲಬುರಗಿ ಮತ್ತು ಬೆಳಗಾವಿ ಕಾರಾಗೃಹಗಳಲ್ಲಿ ಎಐ ಸಿಸಿ ಕ್ಯಾಮರಾ ಅಳವಡಿಸಲಾಗುವುದು ಎಂದು ಹೇಳಿದರು. ನಂತರ ಹಂತ ಹಂತವಾಗಿ ರಾಜ್ಯದ ಎಲ್ಲಾ ಕಾರಾಗೃಹಗಳಿಗೂ ಈ ತಂತ್ರಜ್ಞಾನ ವಿಸ್ತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಇತ್ತೀಚೆಗೆ ಮೈಸೂರು ಕೇಂದ್ರ ಕಾರಾಗೃಹದಲ್ಲಿ ಗಾಂಜಾ ಪತ್ತೆಯಾದ ಪ್ರಕರಣ ವರದಿಯಾಗಿರುವ ಹಿನ್ನೆಲೆಯಲ್ಲಿ, ಕಾರಾಗೃಹಗಳಿಗೆ ನಿಷೇಧಿತ ವಸ್ತುಗಳನ್ನು ತರಲಾಗುವುದನ್ನು ತಡೆಯಲು ಹಾಗೂ ಪತ್ತೆ ಮಾಡಲು ಪ್ರಾಯೋಗಿಕವಾಗಿ ಮೈಸೂರು ಕಾರಾಗೃಹದಲ್ಲಿ ಎಐ ತಂತ್ರಜ್ಞಾನ ಆಧರಿತ ಸಿಸಿ ಕ್ಯಾಮರಾ ಅಳವಡಿಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ಎಐ ಕ್ಯಾಮರಾಗಳು ಗಾಂಜಾ ಸೇರಿದಂತೆ ವಿವಿಧ ನಿಷೇಧಿತ ವಸ್ತುಗಳನ್ನು ಪತ್ತೆಹಚ್ಚುವ ಸಾಮರ್ಥ್ಯ ಹೊಂದಿವೆ. ಪ್ರಾಯೋಗಿಕ ಪರಿಶೀಲನೆಗಾಗಿ ಸಂಬಂಧಿತ ಸಿಬ್ಬಂದಿ ಶೀಘ್ರದಲ್ಲೇ ಮೈಸೂರು ಕಾರಾಗೃಹಕ್ಕೆ ಆಗಮಿಸಲಿದ್ದಾರೆ ಎಂದು ಅಲೋಕ್ ಕುಮಾರ್ ತಿಳಿಸಿದರು.



