ಬೆಂಗಳೂರು: ಪೊಲೀಸ್ ಇಲಾಖೆಯನ್ನೇ ಬೆಚ್ಚಿಬೀಳಿಸಿದ್ದ ಪ್ರಕರಣ, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸಜಾಬಂಧಿ ಕೈದಿಯಾಗಿದ್ದ ಲಷ್ಕರ್ ಎ ತೊಯ್ಬಾ ಉಗ್ರ ಟಿ. ನಸೀರ್‌ಗೆ ನೆರವು ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ, ಎನ್ಐಎ ಅಧಿಕಾರಿಗಳು ಮೂವರು ಆರೋಪಿಗಳ ವಿರುದ್ಧ ಎನ್ಐಎ ಸ್ಪೆಷಲ್ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.
ಈ ಪ್ರಕರಣದಲ್ಲಿ ಸಿಎಆರ್ ಎಎಸ್ಐ ಚಾನ್ ಪಾಷಾ, ಪರಪ್ಪನ ಅಗ್ರಹಾರ ಜೈಲಿನ ಮನೋವೈದ್ಯ ಡಾ. ನಾಗರಾಜ್ ಹಾಗೂ ನಾಪತ್ತೆಯಾಗಿರುವ ಶಂಕಿತ ಉಗ್ರ ಜುನೈದ್ ಅಹಮದ್‌ನ ತಾಯಿ ಅನೀಸ್ ಫಾತೀಮಾ ಆರೋಪಿಗಳಾಗಿದ್ದಾರೆ.
ತನಿಖೆ ವೇಳೆ, ಆರೋಪಿ ಅನೀಸ್ ಫಾತೀಮಾ ಎಲ್ಇಟಿ ಉಗ್ರ ಟಿ. ನಸೀರ್‌ಗೆ ಹಣಕಾಸಿನ ವ್ಯವಸ್ಥೆ ಮಾಡುತ್ತಿದ್ದಳು ಎಂಬುದು ಬೆಳಕಿಗೆ ಬಂದಿದೆ. ಮಗ ಜುನೈದ್ ಅಹಮದ್ ಸೂಚನೆಯಂತೆ ಹ್ಯಾಂಡ್ ಗ್ರೆನೇಡ್ ಹಾಗೂ ವಾಕಿಟಾಕಿ ವ್ಯವಸ್ಥೆ ಮಾಡಿ ಆರೋಪಿಗಳ ನಡುವಿನ ಸಂವಹನಕ್ಕೆ ಸಹಾಯ ಮಾಡಿದ್ದಾಳೆ ಎಂದು ಎನ್ಐಎ ತಿಳಿಸಿದೆ.
ಅದೇ ರೀತಿ, ಸಿಎಆರ್ ಎಎಸ್ಐ ಚಾನ್ ಪಾಷಾ ಉಗ್ರ ಟಿ. ನಸೀರ್‌ನ ಮಾಹಿತಿಯನ್ನು ಹಣದಾಸೆಗಾಗಿ ಹೊರಗಡೆ ರವಾನಿಸುತ್ತಿದ್ದ ಎನ್ನಲಾಗಿದೆ. ಬೆಂಗಾವಲು ಪಡೆ ಸಂಬಂಧಿತ ಮಾಹಿತಿಯನ್ನು ಸಲ್ಮಾನ್ ಖಾನ್ ಎಂಬಾತನಿಗೆ ನೀಡುತ್ತಿದ್ದ ಆರೋಪವೂ ಇದೆ.
ಇನ್ನು ಜೈಲಿನ ಮನೋವೈದ್ಯ ಡಾ. ನಾಗರಾಜ್ ಕಾನೂನು ಬಾಹಿರವಾಗಿ ಜೈಲಿಗೆ ಮೊಬೈಲ್ ಫೋನ್‌ಗಳನ್ನು ಸಾಗಾಟ ಮಾಡಿ, ಖೈದಿಗಳಿಗೆ ಹಣ ಪಡೆದು ಮಾರಾಟ ಮಾಡುತ್ತಿದ್ದ. ಟಿ. ನಸೀರ್‌ಗೂ ಮೊಬೈಲ್ ಒದಗಿಸಿದ್ದು, ಇದೇ ಮೊಬೈಲ್ ಮೂಲಕ ಉಗ್ರ ಸಂಚು ರೂಪಿಸಲಾಗುತ್ತಿತ್ತು ಎಂದು ತನಿಖೆಯಿಂದ ಗೊತ್ತಾಗಿದೆ.
ಈ ಎಲ್ಲಾ ಅಂಶಗಳ ಆಧಾರದಲ್ಲಿ ಎನ್ಐಎ ಅಧಿಕಾರಿಗಳು ಮೂವರು ಆರೋಪಿಗಳ ವಿರುದ್ಧ ಹೆಚ್ಚುವರಿ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಈ ಮೂವರನ್ನು 2025ರ ಜುಲೈ 8ರ ರಾತ್ರಿ ಎನ್ಐಎ ಬಂಧಿಸಿತ್ತು.



