ಸಮೃದ್ಧತೆಗೆ ಹೆಸರಾದ ಅಕ್ಷಯ ತೃತೀಯ

0
akshaya
Spread the love

ಹಿಂದೂ ಪಂಚಾಂಗದ ಪ್ರಕಾರ ಅಕ್ಷಯ ತೃತೀಯವು ಪವಿತ್ರವಾದ ಹಾಗೂ ವಿಶಿಷ್ಟವಾದ ಹಬ್ಬವಾಗಿದೆ.

Advertisement

ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನ ತೃತೀಯದಂದು ಅಕ್ಷಯ ತೃತೀಯ ಹಬ್ಬವನ್ನು ಆಚರಿಸಲಾಗುವುದು. ಕ್ಷಯ ಎಂದರೆ ಕ್ಷಯಿಸುವಂತಹುದು. ಅಕ್ಷಯ ಎಂದರೆ ಎಂದಿಗೂ ಕ್ಷಯಿಸಲಾರದ ಹಾಗೂ ಎಂದಿಗೂ ನಾಶವಾಗದ ಎಂಬ ಅರ್ಥವನ್ನು ನೀಡುತ್ತದೆ. ಅಕ್ಷಯ ತೃತೀಯ ಹಬ್ಬವು ಸಮೃದ್ಧತೆಗೆ ಹೆಸರಾಗಿದ್ದು, ಈ ಸಂದರ್ಭದಲ್ಲಿ ನಾವು ಏನು ಮಾಡಿದರೂ ಅದನ್ನು ಅತ್ಯಧಿಕ ಪ್ರಮಾಣದಲ್ಲಿ ಪಡೆಯುತ್ತೇವೆ ಎಂಬ ನಂಬಿಕೆಯಿದೆ.

ಅಕ್ಷಯ ತೃತೀಯ ಹಬ್ಬವು ಸಾಡೇತೀನ್ ಮುಹೂರ್ತಗಳಲ್ಲೊಂದಾಗಿದೆ. ಯುಗಾದಿ ಪಾಡ್ಯ, ಅಕ್ಷಯ ತೃತೀಯ, ವಿಜಯದಶಮಿ (ಈ ಮೂರು ದಿವಸ) ಮತ್ತು ದೀಪಾವಳಿ ಪಾಡ್ಯ (ಅರ್ಧ ದಿವಸ) ಇವುಗಳು ಸಾಡೇತೀನ್ ಮುಹೂರ್ತಗಳೆನಿಸುತ್ತವೆ. ಈ ದಿವಸಗಳಂದು ಯಾವುದೇ ಹೊಸ ಕೆಲಸ ಪ್ರಾರಂಭಿಸಲು ಅಥವಾ ಖರೀದಿಗಾಗಿ ಪಂಚಾಂಗ ನೋಡುವ ಅವಶ್ಯಕತೆಯಿರುವುದಿಲ್ಲ ಎಂದು ಹೇಳಲಾಗುತ್ತದೆ.

ಈ ಶುಭ ದಿನದಂದು ಜನರು ದಾನ-ಧರ್ಮಗಳನ್ನು ಮಾಡುತ್ತಾರೆ. ವಿವಾಹ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೂ ಸಹ ಈ ದಿನ ಬಹಳ ಪ್ರಶಸ್ತ್ತವಾಗಿದೆ. ಅಕ್ಷಯ ತೃತಿಯ ಹಬ್ಬವು ಕೆಲವೊಂದು ಪೌರಾಣಿಕ ಕಥೆಗಳನ್ನೂ ಸಹ ಹೊಂದಿದೆ. ಭಗವಾನ್ ವಿಷ್ಣುವು ಪರಶುರಾಮರ ಅವತಾರವನ್ನು ತಾಳಿದ್ದು ಇದೇ ದಿವಸವಾಗಿದೆ. ಜಮದಗ್ನಿ ಋಷಿಯ ಮತ್ತು ರೇಣುಕೆಯ ಮಗನಾಗಿ ಬ್ರಾಹ್ಮಣ ಕುಲದಲ್ಲಿ ಪರಶುರಾಮರು ಜನಿಸುತ್ತಾರೆ. ಪರಶುರಾಮರು ಅಧರ್ಮದ ನಾಶ ಮಾಡಿ ಧರ್ಮ ಸಂಸ್ಥಾಪನೆಗೆ ಕಾರಣರಾಗುತ್ತಾರೆ.

ತಮ್ಮ ಪೂರ್ವಜರಿಗೆ ಮುಕ್ತಿಯನ್ನು ದೊರಕಿಸುವುದಕ್ಕೋಸ್ಕರ ಭಗೀರಥ ಮಹಾರಾಜನು ಗಂಗೆಯನ್ನು ಕುರಿತು ತನ್ನ ಕಠಿಣ ತಪಸ್ಸಿನ ಮುಖಾಂತರ ಭೂಮಿಗೆ ಬರಮಾಡಿಕೊಂಡಿದ್ದು ಸಹ ಈ ಶುಭದಿನದಂದು ಎಂಬ ಪ್ರತೀತಿ ಇದೆ. ಈ ದಿನ ಗಂಗಾ ಸ್ನಾನ ಮಾಡಿದರೆ ಸಕಲ ಪಾಪಗಳ ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ.

ಅನ್ನಪೂರ್ಣೆ ದೇವಿಯು ಸಮೃದ್ಧತೆಯ ಸಂಕೇತವೆನಿಸಿದ್ದಾರೆ. ಅನ್ನಪೂರ್ಣೆಯು ಪಾರ್ವತಿ ದೇವಿಯ ಅಂಶವಾಗಿದ್ದು, ಎಲ್ಲ ಆಹಾರ-ಪದಾರ್ಥಗಳಿಗೆ ಆಕೆಯ ಕೃಪೆಯಾದರೆ ಸಾಕು. ಅಕ್ಷಯ ತೃತೀಯದಂದು ಈ ದೇವಿಯ ಜನನ ತಾಳಿದ್ದಾಳೆ ಎಂಬ ಪ್ರತೀತಿ ಇದೆ. ಆದ್ದರಿಂದ ಅಕ್ಷಯ ತೃತಿಯದಂದು ಈ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.

ಮಹಾಭಾರತದಲ್ಲಿ ಕೂಡ ಅಕ್ಷಯ ತೃತೀಯ ದಿನದ ವಿಶೇಷತೆಯಿದೆ. ಯುಧಿಷ್ಟಿರನಿಗೆ ಅಕ್ಷಯ ಪಾತ್ರೆ ದೊರೆತಿದ್ದು ಇದೇ ದಿನದಂದು. ಪಾಂಡವರು ಕೌರವರೊಂದಿಗೆ ಪಗಡೆಯಾಟದಲ್ಲಿ ಸೋತಾಗ ದ್ರೌಪದಿಯ ವಸ್ತಾçಪಹರಣದ ಸಂದರ್ಭದಲ್ಲಿ ದ್ರೌಪದಿಯು ಆರ್ತಳಾಗಿ ಕೃಷ್ಣ ಪರಮಾತ್ಮನನ್ನು ಬೇಡಿಕೊಂಡಾಗ ಆಕೆಯ ಮಾನವನ್ನು ಶ್ರೀ ಕೃಷ್ಣನು ರಕ್ಷಿಸುತ್ತಾನೆ ಮತ್ತು ಅವಳ ವಸ್ತçವು ಅಕ್ಷಯವಾಗುತ್ತದೆ. ಈ ದಿನ ಕೂಡ ಅಕ್ಷಯ ತೃತಿಯವಾಗಿತ್ತು.

ಕೃಷ್ಣನ ಬಾಲ್ಯದ ಗೆಳೆಯನಾದ ಸುಧಾಮನು ಬಡತನ ಅನುಭವಿಸುತ್ತಿದ್ದನು. ಅವನು ತನ್ನ ಸ್ನೇಹಿತನಾದ ಕೃಷ್ಣನ ಹತ್ತಿರ ಸಹಾಯ ಯಾಚಿಸುವುದಕ್ಕಾಗಿ ದ್ವಾರಕೆಯಲ್ಲಿನ ಕೃಷ್ಣನ ಅರಮನೆಗೆ ಭೇಟಿ ನೀಡುತ್ತಾನೆ.

ಆದರೆ ಮುಜಗರದಿಂದ ಕೃಷ್ಣನೊಂದಿಗೆ ತನ್ನ ಬಡತನದ ಯಾತನೆಯನ್ನು ತೋಡಿಕೊಳ್ಳಲು ಸುಧಾಮನಿಗೆ ಆಗುವುದಿಲ್ಲ. ಆದರೆ ಶ್ರೀ ಕೃಷ್ಣ ಪರಮಾತ್ಮನು ತನ್ನ ಗೆಳೆಯ ಸುಧಾಮನ ನಿಷ್ಕಲ್ಮಶ ಮನಸ್ಸು ಹಾಗೂ ಭಕ್ತಿಯನ್ನು ಬಲ್ಲವನಾಗಿದ್ದು, ಅವನು ಏನೂ ಯಾಚಿಸದಿದ್ದರೂ ಸಹ ಅವನ ಬಡತನ ನೀಗಿಸಿ ಸಿರಿ ಸಂಪತ್ತನ್ನು ಪರಿಪಾಲಿಸುತ್ತಾನೆ. ಆ ದಿನವೂ ಸಹ ಅಕ್ಷಯ ತೃತೀಯ ಆಗಿತ್ತು ಎಂದು ಹೇಳಲಾಗುತ್ತದೆ.

ಅಕ್ಷಯ ತೃತೀಯ ದಿನದಂದು ಮನೆಗಳನ್ನು ಸ್ವಚ್ಛಗೊಳಿಸಿ ತಳಿರು-ತೋರಣಗಳಿಂದ ಸಿಂಗರಿಸುತ್ತಾರೆ.

ಅಂಗಳವನ್ನು ಬಣ್ಣ ಬಣ್ಣದ ರಂಗವಲ್ಲಿಯ ಚಿತ್ತಾರದಿಂದ ಅಲಂಕರಿಸುತ್ತಾರೆ. ಈ ಶುಭ ದಿನದಂದು ಧಾರ್ಮಿಕ ವಿಧಿ-ವಿಧಾನಗಳಿಂದ ಭಕ್ತರುಗಳು ಭಗವಾನ್ ವಿಷ್ಣು, ಲಕ್ಷ್ಮಿದೇವಿಯ ಹಾಗೂ ತಮ್ಮ ಇಷ್ಟ ದೇವರುಗಳನ್ನು ಪೂಜಿಸುತ್ತಾರೆ. ಸಿಹಿ ತಿಂಡಿಗಳನ್ನು ಸವಿಯುತ್ತಾರೆ. ಕುಟುಂಬದವರೆಲ್ಲರೂ ಹೊಸ ಬಟ್ಟೆಗಳನ್ನು ಧರಿಸಿ ದೇವಸ್ಥಾನಗಳಿಗೆ ತೆರಳಿ ಗುರು-ಹಿರಿಯರ ಆಶೀರ್ವಾದ ಪಡೆಯುತ್ತಾರೆ. ಈ ಶುಭ ದಿನದಂದು ಮಾರುಕಟ್ಟೆಯಲ್ಲಿ ಹೊಸ ಬಟ್ಟೆಗಳ ಹಾಗೂ ಆಭರಣಗಳ ಖರೀದಿ ಸಹ ಜೋರಾಗಿರುತ್ತದೆ.

ಒಟ್ಟಾರೆಯಾಗಿ,ಇಂದಿನ ಯಾಂತ್ರಿಕ ಯುಗದಲ್ಲಿಯೂ ತಮಗೆ ಲಭ್ಯವಿರುವ ಸಮಯದಲ್ಲಿಯೇ ಕುಟುಂಬದ ಸದಸ್ಯರೊಂದಿಗೆ ಹಬ್ಬಗಳನ್ನು ಸಂತೋಷದಿಂದ ಆಚರಿಸಿ ಸಂಭ್ರಮಿಸುವಂತಾಗಲಿ. ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಗಳ ಆಚರಣೆಯು ಎಲ್ಲರಿಗೂ ಹರುಷ ತರಲಿ.
– ಅಂಜನಾ ರಾಘವೇಂದ್ರ ಕುಬೇರ, ಗದಗ.


Spread the love

LEAVE A REPLY

Please enter your comment!
Please enter your name here