ವಿಜಯಸಾಕ್ಷಿ ಸುದ್ದಿ, ರೋಣ : ಗ್ರಾಮದ ಆದಿ ದೇವತೆಯಾದ ದ್ಯಾಮವ್ವ ದೇವಿಯ ಮೂರು ದಿನಗಳ ಉತ್ಸವಕ್ಕೆ ಗ್ರಾಮ ಸನ್ನದ್ಧಗೊಂಡಿದೆ.
ಗ್ರಾಮದಲ್ಲಿ ಮಳೆ-ಬೆಳೆ ಚೆನ್ನಾಗಿ ಬರಲಿ, ಗ್ರಾಮದ ಜನರು ಸೇರಿದಂತೆ ಪ್ರಾಣಿ-ಪಕ್ಷಿಗಳು ಆರೋಗ್ಯದಿಂದ ಬದುಕಲಿ ಎಂಬ ದೃಷ್ಟಿಯಿಂದ ಸತತ ಮೂರು ದಿನಗಳ ಕಾಲ ಗ್ರಾಮಸ್ಥರು ದ್ಯಾಮವ್ವ ದೇವಿಯ ಉತ್ಸವವನ್ನು ಅದ್ದೂರಿಯಿಂದ ಆಚರಿಸುತ್ತಾರೆ.
ಈ ಮೊದಲು 2019ರಲ್ಲಿ ದೇವಿಯ ಉತ್ಸವವನ್ನು ಆಚರಿಸಲಾಗಿತ್ತು.
ಎಪ್ರಿಲ್ 14ರಂದು ಭೂಮಿತಾಯಿಗೆ ಹಾಲು ಎರೆಯುವುದು, 15ರಂದು 501 ಕುಂಭಮೇಳದೊಂದಿಗೆ ದೇವಿಯ ಮೇರವಣಿಗೆ ನಡೆಸುವುದು, ದೇವಿಯನ್ನು ಮರು ಪ್ರತಿಷ್ಠಾಪನೆ ಮಾಡುವುದು ಹಿಗೆ ಮೂರು ದಿನಗಳ ಕಾಲ ಸಂಭ್ರಮದಿಂದ ನಡೆಯುವ ದೇವಿಯ ಜಾತ್ರಾ ಮಹೋತ್ಸವದಲ್ಲಿ ನಿರಂತರ ಅನ್ನಸಂತರ್ಪಣೆ ಕೂಡ ನೆರವೇರಲಿದೆ.
ಗ್ರಾಮದ ಸರಹದ್ದಿನ ಜಮೀನುಗಳಿಗೆ ಹಾಲು ಎರೆಯಲು ಹಾಗೂ ಬೆಳೆದ ಬೆಳೆ ಹುಲುಸಾಗಿ ಬರಲಿ ಎಂದು 2 ಸಾವಿರ ಲೀಟರ್‌ಗೂ ಅಧಿಕ ಹಾಲನ್ನು ಉಪಯೋಗಿಸಲಾಗುತ್ತದೆ. ಈ ಸಂಧರ್ಭದಲ್ಲಿ ಮಡಿಯಿಂದ ರೈತರು ಜಮೀನುಗಳಿಗೆ ತೆರಳುತ್ತಾರೆ. ಯಾವುದೇ ಬೇಧ-ಭಾವಗಳಿಲ್ಲದೆ ಎಲ್ಲರೂ ಭೂತಾಯಿಗೆ ಹಾಲು ಎರೆಯುತ್ತಾರೆ.
ಗ್ರಾಮದಲ್ಲಿ ಆಚರಿಸುತ್ತಿರುವ ದೇವಿಯ ಉತ್ಸವಕ್ಕೆ ವಿವಾಹವಾಗಿ ಬೆರೆ ಗ್ರಾಮಗಳಿಗೆ ತೆರಳಿದ ಎಲ್ಲ ಹೆಣ್ಣು ಮಕ್ಕಳು ಗ್ರಾಮಕ್ಕೆ ಆಗಮಿಸುತ್ತಾರೆ. ಅಲ್ಲದೆ ಜಾತ್ರಾ ಮಹೋತ್ಸವದಲ್ಲಿ ಜಾತಿ-ಧರ್ಮಗಳ ಜಂಜಾಟವಿಲ್ಲದೆ ಭಾಗಿಯಾಗುತ್ತಾರೆ. ದೇವಿಯ ದರ್ಶನ ಪಡೆಯುವ ಮಹಿಳೆಯರು ತನ್ನ ತವರು ಮನೆಯ ಏಳ್ಗೆಗೆ ಹಾರೈಸುತ್ತಾರೆ.
ಏಪ್ರಿಲ್ 14, 15, 16ರಂದು ಜರುಗುವ ದೇವಿಯ ಉತ್ಸವಕ್ಕೆ ಗ್ರಾಮ ಸಿದ್ದಗೊಂಡಿದೆ. ಮೂರು ದಿನಗಳ ಕಾಲ ದೇವಿಗೆ ವಿಷೇಷ ಪೂಜಾ ಕಾರ್ಯದ ಜೊತೆಗೆ ಅನ್ನಸಂತರ್ಪಣೆ ಕೂಡ ನಡೆಯುತ್ತದೆ.
ಸರ್ವಧರ್ಮದವರು ದೇವಿಯ ಉತ್ಸವದಲ್ಲಿ ಭಾಗಿಯಾಗಿ ಕಾಯಿ-ಕರ್ಪೂರಗಳನ್ನು ಅರ್ಪಿಸುತ್ತಾರೆ ಎಂದು ಮಾಹಿತಿ ನೀಡುತ್ತಾರೆ ದೇವಸ್ಥಾನದ ಹಿರಿಯರು.