ಕನಕಪುರ:- ದುಡ್ಡು ಪಡೆದು ಮನೆ ನೀಡಿದ್ದೀರಿ ಎನ್ನುವ ಶಾಸಕ ಬಿ.ಆರ್.ಪಾಟೀಲ್ ಅವರ ಆರೋಪದ ಬಗ್ಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, “ಇದೆಲ್ಲವೂ ಸುಳ್ಳು, ಯಾರೋ ಒಬ್ಬ ಹೇಳಿದರೆ ಇದೆಲ್ಲವೂ ಆಗುತ್ತದೆಯೇ? ನಾನು ಅಥವಾ ನೀವು ಬಂದು ಗ್ರಾಮ ಸಭೆಯಲ್ಲಿ ಮನೆ ಕೇಳಿದ ತಕ್ಷಣ ಕೊಡಲು ಆಗುತ್ತದೆಯೇ? ಮನೆ ನೀಡಲು ತೀರ್ಮಾನ ಮಾಡುವವರು ಗ್ರಾಮ ಪಂಚಾಯತಿ, ಮುನಿಸಿಪಾಲಿಟಿ ಸೇರಿದಂತೆ ಎಲ್ಲೆಲ್ಲಿ ಮನೆ ನೀಡಬೇಕೋ ಆಯಾಯ ಸ್ಥಳೀಯ ಸಂಸ್ಥೆಗಳು ತೀರ್ಮಾನ ಮಾಡುತ್ತಾರೆ. ನಾವು ತೀರ್ಮಾನ ಮಾಡಲು ಆಗುತ್ತದೆಯೇ” ಎಂದರು.
“ಬಿ.ಆರ್.ಪಾಟೀಲ್ ಅವರಿಗೆ ಪೂರ್ಣ ಮಾಹಿತಿ ತಿಳಿದಿದೆಯೋ ಇಲ್ಲವೊ ಗೊತ್ತಿಲ್ಲ. ಯಾವುದೇ ರೀತಿಯ ಅಕ್ರಮ ನಡೆದಿಲ್ಲ. ನಾನು ಅವರ ಬಳಿ ಮಾತನಾಡುತ್ತೇನೆ” ಎಂದು ಸ್ಪಷ್ಟವಾಗಿ ನುಡಿದರು. ಇನ್ನೂ ಇದಕ್ಕೂ ಮುನ್ನ ಕನಕಪುರದ ಹಾರೋಹಳ್ಳಿಯ ಮರಳವಾಡಿಯಲ್ಲಿ ಸ್ಥಾಪನೆಯಾಗಿರುವ ನೂತನ ಕರಿಯಪ್ಪ ಕೃಷಿ ಮಹಾವಿದ್ಯಾಲಯದ ಕಟ್ಟಡಕ್ಕೆ ಶಿವಕುಮಾರ್ ಶಂಕುಸ್ಥಾಪನೆ ನೆರವೇರಿಸಿದರು. ಬಳಿಕ ಈ ಬಗ್ಗೆ ಮಾತನಾಡಿ, “ನನಗೂ ಹಾಗೂ ಸಂಸ್ಥೆಯ ಅಧ್ಯಕ್ಷರಾದ ಶ್ರೀಕಂಠು ಅವರಿಗೆ ಸಂಸ್ಥೆಯ ಜಾಗ ಎಲ್ಲಿ ಒತ್ತುವರಿಯಾಗುತ್ತದೆಯೋ ಎನ್ನುವ ಆಂತಕವಿತ್ತು. ಈಗ ಸದರಿ ಜಾಗದಲ್ಲಿ ಕೃಷಿ ಕಾಲೇಜು ಸ್ಥಾಪನೆಯಾಗುತ್ತಿರುವುದು ಸಮಾಧಾನ ತಂದಿದೆ” ಎಂದರು.
“ರೂರಲ್ ಎಜುಕೇಶನ್ ಸೊಸೈಟಿ ಅವರು ನನ್ನನ್ನು ಸರಿಯಾಗಿ ಉಪಯೋಗಿಸಿಕೊಳ್ಳುತ್ತಾ ಇರಲಿಲ್ಲ. ಈ ಹಿಂದೆ ಡಿ.ಲಿಂಗೇಗೌಡರು, ಚನ್ನಬಸವೇಗೌಡರ ಕಾಲದಿಂದಲೂ ಈ ಬಗ್ಗೆ ನಾನು ಹೇಳುತ್ತಾ ಬಂದಿದ್ದೇನೆ. ಚನ್ನಬಸವೇಗೌಡರ ಕಾಲದಲ್ಲಿಯೇ ನರ್ಸಿಂಗ್ ಕಾಲೇಜು ಮಂಜೂರು ಆಗಿದ್ದರು ನನ್ನನ್ನು ಭೇಟಿ ಮಾಡಲು ಅವಮಾನ ಎಂದುಕೊಂಡು ಬಂದಿರಲಿಲ್ಲ” ಎಂದು ಹೇಳಿದರು.