ಬೆಳಗಾವಿ: ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ನೌಕರರ ಭವಿಷ್ಯ ನಿಧಿ (PF) ಹಾಗೂ ಎನ್ಪಿಎಸ್ ಹಣ ದುರ್ಬಳಕೆ ಮಾಡಿಕೊಂಡಿರುವ ಆರೋಪದ ಪ್ರಕರಣ ಬೆಳಕಿಗೆ ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಾಯಕ ಕುಲಸಚಿವ ಸೇರಿದಂತೆ ಮೂವರನ್ನು ಕಾಕತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
2020ರಿಂದ 2023ರ ಅವಧಿಯಲ್ಲಿ ವಿಶ್ವವಿದ್ಯಾಲಯದ ನೌಕರರ ಪಿಎಫ್ ಹಾಗೂ ಎನ್ಪಿಎಸ್ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ವಿಶ್ವವಿದ್ಯಾಲಯದ ಬ್ಯಾಂಕ್ ಖಾತೆಯಿಂದ ಸುಮಾರು ₹32 ಲಕ್ಷ ಹಣವನ್ನು ಆರೋಪಿಗಳ ಸ್ವಂತ ಹಾಗೂ ಇತರ ಖಾಸಗಿ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ ಎನ್ನಲಾಗಿದೆ.
ಇದಲ್ಲದೆ, ವಿವಿಯ ಖಾತೆಯಿಂದ ಫರ್ನಿಚರ್ ಅಂಗಡಿಗೂ ಹಣ ವರ್ಗಾವಣೆ ಮಾಡಿ ದುರ್ಬಳಕೆ ಮಾಡಿಕೊಂಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆನ್ಲೈನ್ ಬ್ಯಾಂಕ್ ಖಾತೆ ಕ್ಲೋಸ್ ಮಾಡಿದ ಬಳಿಕ ಬಯಲಿಗೆ:
2024ರಲ್ಲಿ ವಿಶ್ವವಿದ್ಯಾಲಯದ ಆನ್ಲೈನ್ ಬ್ಯಾಂಕ್ ಖಾತೆಯನ್ನು ಕ್ಲೋಸ್ ಮಾಡಲಾಗಿತ್ತು. ಖಾತೆ ಮುಚ್ಚಿರುವ ಕುರಿತು ಪರಿಶೀಲನೆ ನಡೆಸಿದ ವೇಳೆ ಕಳೆದ ಮೂರು ವರ್ಷಗಳಿಂದ ನೌಕರರ ಪಿಎಫ್ ಹಣವನ್ನು ಅಕ್ರಮವಾಗಿ ಡ್ರಾ ಮಾಡಿ ಬಳಸಿಕೊಂಡಿರುವ ಆರೋಪ ಬೆಳಕಿಗೆ ಬಂದಿದೆ.
ಅಕ್ರಮದ ಮಾಹಿತಿ ದೊರೆತ ಬಳಿಕ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಕಾಕತಿ ಪೊಲೀಸ್ ಠಾಣೆಗೆ ದೂರು ನೀಡಿತ್ತು. ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಕೈಗೊಂಡು ಸಹಾಯಕ ಕುಲಸಚಿವ ಹೆಚ್.ಎಂ. ಮುರುಗೇಶ್ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.
ಬೆಳಗಾವಿ ನಗರ ಪೊಲೀಸ್ ಆಯುಕ್ತ ಪ್ರಕಾಶ್ ನಿಕ್ಕಂ ಅವರ ಮಾಹಿತಿ ಪ್ರಕಾರ, ಪ್ರಕರಣದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ತಪ್ಪಿತಸ್ಥರು ಕಂಡುಬಂದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.



