ಬೆಂಗಳೂರು: ಅಂತಾರಾಷ್ಟ್ರೀಯ ಪ್ರಯಾಣಿಕರ ಪಾಸ್ಪೋರ್ಟ್ಗಳನ್ನು ದುರುಪಯೋಗಪಡಿಸಿಕೊಂಡು ಡ್ಯೂಟಿ ಫ್ರೀ ಅಂಗಡಿಯಿಂದ ಮದ್ಯ ಖರೀದಿಸಿದ ಆರೋಪದ ಮೇಲೆ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮಾಜಿ ಕಸ್ಟಮ್ಸ್ ಅಧೀಕ್ಷಕ ಆಂಥೋನಿ ರಾಜ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಲೋಕಪಾಲ್ ಆದೇಶಿಸಿದೆ. ಈ ಸಂಬಂಧ ಸಿಬಿಐಗೆ ಸೂಚನೆ ನೀಡಲಾಗಿದೆ.
ಪಾಸ್ಪೋರ್ಟ್ ಪಡೆದು ಮದ್ಯ ಖರೀದಿಸಿದ ಆರೋಪ:
ಆಂಥೋನಿ ರಾಜ್ ಅವರು ವಿಮಾನ ನಿಲ್ದಾಣ ಹಾಗೂ ಏರ್ ಕಾರ್ಗೋ ಕಾಂಪ್ಲೆಕ್ಸ್ನಲ್ಲಿ ಕಸ್ಟಮ್ಸ್ ಅಧೀಕ್ಷಕರಾಗಿ ಕಾರ್ಯನಿರ್ವಹಿಸಿದ್ದ ಸಂದರ್ಭದಲ್ಲಿ ಈ ಅಕ್ರಮ ನಡೆದಿದೆ ಎನ್ನಲಾಗಿದೆ. ಅಂತಾರಾಷ್ಟ್ರೀಯ ಪ್ರಯಾಣಿಕರ ಪಾಸ್ಪೋರ್ಟ್ಗಳನ್ನು ಬಲವಂತವಾಗಿ ಪಡೆದು, ವಿವಿಧ ಬ್ರ್ಯಾಂಡ್ಗಳ ಮದ್ಯವನ್ನು ತಮ್ಮದೇ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ಗಳ ಮೂಲಕ ಖರೀದಿಸಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.
ಈ ಪ್ರಕ್ರಿಯೆಯಲ್ಲಿ ತೆರಿಗೆ ವಂಚನೆ ನಡೆದಿದ್ದು, ಅಕ್ರಮಕ್ಕೆ ಸಹಕರಿಸಿದ ಪ್ರಯಾಣಿಕರಿಗೆ ಉಡುಗೊರೆಗಳನ್ನು ನೀಡಲಾಗಿದೆ ಎಂಬ ಆರೋಪವೂ ಇದೆ. ಹಲವು ವಾರಗಳು ಅಥವಾ ತಿಂಗಳುಗಳ ಕಾಲ ಈ ರೀತಿ ಮದ್ಯ ಖರೀದಿಸಲಾಗಿದೆ ಎನ್ನಲಾಗಿದ್ದು, ಇದರಿಂದ ಸರ್ಕಾರಿ ಬೊಕ್ಕಸಕ್ಕೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಭ್ರಷ್ಟಾಚಾರ ತಡೆ ಕಾಯ್ದೆಯಡಿ ಕ್ರಮಕ್ಕೆ ಸೂಚನೆ:
ಪ್ರಯಾಣಿಕರ ಪಾಸ್ಪೋರ್ಟ್ಗಳನ್ನು ಬಳಸಿಕೊಂಡು ಮದ್ಯ ಖರೀದಿಸಿರುವ ಆರೋಪವು ಭ್ರಷ್ಟಾಚಾರ ತಡೆ ಕಾಯ್ದೆ, 1988ರ ಅಡಿಯಲ್ಲಿ ಪರಿಶೀಲನೆಗೆ ಒಳಪಟ್ಟಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಕುರಿತು ಪ್ರಾಥಮಿಕ ತನಿಖೆ ನಡೆಸಲು ಲೋಕಪಾಲ್ ಮುಂದಾಗಿತ್ತು.
2026ರ ಫೆಬ್ರವರಿ 13ರಂದು ಕೇಂದ್ರ ಜಾಗೃತ ಆಯೋಗಕ್ಕೆ (ಸಿವಿಸಿ) ನಾಲ್ಕು ವಾರಗಳೊಳಗೆ ಪ್ರಾಥಮಿಕ ತನಿಖಾ ವರದಿ ಸಲ್ಲಿಸುವಂತೆ ಸೂಚಿಸಲಾಗಿತ್ತು. ಸಿವಿಸಿ ಜುಲೈ 28ರಂದು ವರದಿಯನ್ನು ಲೋಕಪಾಲ್ಗೆ ಸಲ್ಲಿಸಿತ್ತು.
ವರದಿಯನ್ನು ಪರಿಶೀಲಿಸಿದ ಬಳಿಕ ಆಂಥೋನಿ ರಾಜ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಸಿಬಿಐಗೆ ಸೂಚನೆ ನೀಡಲಾಗಿದೆ. ಪ್ರಕರಣದಲ್ಲಿ ಕೇಳಿಬಂದಿರುವ ಆರೋಪಗಳ ಕುರಿತು ಮುಂದಿನ ತನಿಖೆಯಲ್ಲಿ ಹೆಚ್ಚಿನ ಮಾಹಿತಿ ಬಹಿರಂಗವಾಗುವ ನಿರೀಕ್ಷೆಯಿದೆ.



