ಹಾವೇರಿ: ಕಲ್ಲು ಕ್ವಾರಿ ಪರವಾನಗಿ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕಲ್ಲು ಕ್ವಾರಿ ಮಾಲೀಕರಾದ ರುದ್ರಪ್ಪ ಲಮಾಣಿ ಅವರಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ₹3 ಕೋಟಿ ದಂಡ ವಿಧಿಸಿದೆ.
ರಾಣೆಬೆನ್ನೂರು ತಾಲೂಕಿನ ಹುಣಸಿಕಟ್ಟಿ ಬಳಿಯಿರುವ ಕಲ್ಲು ಕ್ವಾರಿಗೆ ಸಂಬಂಧಿಸಿದಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.
ಕ್ವಾರಿಗೆ ನಿಗದಿಪಡಿಸಿದ ವ್ಯಾಪ್ತಿಯನ್ನು ಮೀರಿ ಹೆಚ್ಚುವರಿಯಾಗಿ ಕಲ್ಲು ತೆಗೆದಿರುವುದು ಹಾಗೂ ಕ್ವಾರಿ ಸುತ್ತಮುತ್ತಲಿನ ಪ್ರದೇಶವನ್ನು ಒತ್ತುವರಿ ಮಾಡಿಕೊಂಡು ಗಣಿಗಾರಿಕೆ ನಡೆಸಿರುವುದು ನಿಯಮ ಉಲ್ಲಂಘನೆ ಎಂದು ಇಲಾಖೆಯ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.
ಕ್ವಾರಿ ಪ್ರದೇಶದಲ್ಲಿ ನಿಯಮ ಉಲ್ಲಂಘನೆಯಾಗಿದೆಯೇ ಎಂಬುದನ್ನು ಪರಿಶೀಲಿಸಲು ಡ್ರೋನ್ ಮೂಲಕ ಸಮೀಕ್ಷೆ ನಡೆಸಲಾಗಿದ್ದು, ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಶನ್ಸ್ ಸೆಂಟರ್ (KRSAC) ಮೂಲಕ ನಡೆಸಲಾದ ಸಮೀಕ್ಷೆಯ ಆಧಾರದ ಮೇಲೆ ಅಕ್ರಮಗಳನ್ನು ಗುರುತಿಸಲಾಗಿದೆ ಎಂದು ತಿಳಿದುಬಂದಿದೆ.
ಹಾವೇರಿ ಜಿಲ್ಲೆಯಲ್ಲಿ 60ಕ್ಕೂ ಹೆಚ್ಚು ಕಲ್ಲು ಕ್ವಾರಿ ಮಾಲೀಕರಿಗೆ ದಂಡ ವಿಧಿಸಲಾಗಿದ್ದು, ಈ ಪಟ್ಟಿಯಲ್ಲಿ ರುದ್ರಪ್ಪ ಲಮಾಣಿ ಅವರ ಕ್ವಾರಿಯೂ ಸೇರಿದೆ ಎನ್ನಲಾಗಿದೆ.
ದಂಡದ ಮೊತ್ತವನ್ನು ಪಾವತಿಸಲು ಸಚಿವರಿಗೆ ಆರು ತಿಂಗಳ ಕಾಲಾವಕಾಶ ನೀಡಲಾಗಿದೆ. ಒಟ್ಟು ₹3 ಕೋಟಿ ದಂಡವನ್ನು ಮೂರು ಕಂತುಗಳಲ್ಲಿ ಪಾವತಿಸುವಂತೆ ಸೂಚಿಸಲಾಗಿದೆ ಎಂದು ವರದಿಯಾಗಿದೆ.



