HomeKarnataka Newsಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ಆರೋಪ; ಮಾಜಿ ಸಚಿವರ ಸಹೋದರನ ಕುಟುಂಬದ 7 ಮಂದಿ ವಿರುದ್ಧ...

ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ಆರೋಪ; ಮಾಜಿ ಸಚಿವರ ಸಹೋದರನ ಕುಟುಂಬದ 7 ಮಂದಿ ವಿರುದ್ಧ FIR

ತುಮಕೂರು: ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ವಂಚನೆ ಹಾಗೂ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಾಜಿ ಸಚಿವ ದಿವಂಗತ ಸುಧಾಕರ್ ಅವರ ಸಹೋದರ ಡಿಎಸ್. ಕುಮಾರ್ ಕುಟುಂಬದ ವಿರುದ್ಧ ತುಮಕೂರು ನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಡಿಎಸ್. ಕುಮಾರ್ ಪುತ್ರ ಅರ್ಜುನ್ ಸೇರಿದಂತೆ ಕುಟುಂಬದ ಒಟ್ಟು ಏಳು ಮಂದಿ ವಿರುದ್ಧ ಯುವತಿ ದೂರು ನೀಡಿದ್ದಾರೆ. ದೂರಿನ ಪ್ರಕಾರ, ಯುವತಿ ಮತ್ತು ಅರ್ಜುನ್ ಕಳೆದ 16 ವರ್ಷಗಳಿಂದ ಪರಿಚಿತರಾಗಿದ್ದು, ಕಳೆದ ಏಳು ವರ್ಷಗಳಿಂದ ಅರ್ಜುನ್ ಪ್ರೀತಿಸುವುದಾಗಿ ಹೇಳಿ ಮದುವೆಯಾಗುವುದಾಗಿ ನಂಬಿಸಿದ್ದ ಎನ್ನಲಾಗಿದೆ.

2020ರಲ್ಲಿ ಎರಡೂ ಕುಟುಂಬಗಳ ಪೋಷಕರ ಸಮ್ಮುಖದಲ್ಲಿ ಕುಂಕುಮ ಶಾಸ್ತ್ರ ನಡೆದಿತ್ತು. ಬಳಿಕ ಇಬ್ಬರೂ ಹಲವು ಕಡೆ ಪ್ರವಾಸ ಮಾಡಿದ್ದು, ಈ ಸಂದರ್ಭದಲ್ಲಿ ಅರ್ಜುನ್ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಯುವತಿ ಆರೋಪಿಸಿದ್ದಾರೆ.

ಮದುವೆ ವಿಚಾರವಾಗಿ ಎರಡೂ ಕುಟುಂಬಗಳ ನಡುವೆ ಮಾತುಕತೆ ಮುಂದುವರಿದಿದ್ದು, 2025ರ ಅಕ್ಟೋಬರ್‌ನಲ್ಲಿ ನಿಶ್ಚಿತಾರ್ಥ ನಡೆಸಲು ಸಿದ್ಧತೆ ನಡೆದಿತ್ತು. ಕುಟುಂಬಗಳ ನಡುವೆ ಭಿನ್ನಾಭಿಪ್ರಾಯ ಉಂಟಾದ ಬಳಿಕ ಡಿಸೆಂಬರ್‌ನಲ್ಲಿ ನಿಶ್ಚಿತಾರ್ಥ ನೆರವೇರಿಸಲಾಗಿತ್ತು. 2026ರ ಮಾರ್ಚ್ 1ರಂದು ಮದುವೆ ದಿನಾಂಕವನ್ನೂ ನಿಗದಿಪಡಿಸಲಾಗಿತ್ತು ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.

ಆದರೆ ಮದುವೆಗೆ ಎರಡು ತಿಂಗಳು ಬಾಕಿ ಇರುವಾಗ ಅರ್ಜುನ್ ಕುಟುಂಬ ಮದುವೆ ನಿರ್ಧಾರದಿಂದ ಹಿಂದೆ ಸರಿದಿದೆ ಎಂದು ಯುವತಿ ಆರೋಪಿಸಿದ್ದಾರೆ. ಬಳಿಕ ಕುಟುಂಬದವರನ್ನು ಸಂಪರ್ಕಿಸಲು ಹಲವು ಬಾರಿ ಪ್ರಯತ್ನಿಸಿದರೂ ಸ್ಪಂದಿಸಲಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ತಮ್ಮಿಂದ ತಪ್ಪಾಗಿದ್ದರೆ ಕ್ಷಮಿಸುವಂತೆ ಮನವಿ ಮಾಡಿದರೂ ಸ್ಪಂದಿಸದೆ, ಡಿಎಸ್. ಕುಮಾರ್ ಅವರು ಲಾರಿ ಹರಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂಬ ಆರೋಪವನ್ನೂ ಯುವತಿ ಮಾಡಿದ್ದಾರೆ.

ಸದ್ಯ ಪೊಲೀಸರು ಯುವತಿಯ ಹೇಳಿಕೆ ದಾಖಲಿಸಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದ ಸ್ಥಳಗಳಲ್ಲಿ ಮಹಜರ್ ನಡೆಸಿದ್ದಾರೆ. ಮುಂದಿನ ಹಂತದಲ್ಲಿ ನ್ಯಾಯಾಧೀಶರ ಮುಂದೆ ಯುವತಿಯ ಸೆಕ್ಷನ್ 164ರ ಹೇಳಿಕೆ ದಾಖಲಿಸುವ ಸಾಧ್ಯತೆ ಇದೆ. ಬಳಿಕ ತನಿಖೆಯ ಆಧಾರದ ಮೇಲೆ ಪೊಲೀಸರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img