ಹಾಸನ: ಹಾಸನದ ಅಧಿದೇವತೆ ಹಾಸನಾಂಬೆ ದೇವಿಯ ದರ್ಶನಕ್ಕೆ ಏಳನೇ ದಿನವೂ ಭಕ್ತಸಾಗರವೇ ಹರಿದುಬಂದಿದೆ. ಬೆಳಗ್ಗೆಯಿಂದಲೇ ಸಾವಿರಾರು ಭಕ್ತರು ದೇವಿಯ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದು, ಧರ್ಮದರ್ಶನ ಹಾಗೂ ವಿಶೇಷ ದರ್ಶನದ ಸಾಲುಗಳಲ್ಲಿ ಭಕ್ತರ ದಂಡೇ ಕಂಡುಬಂದಿದೆ.
ರಾತ್ರಿ ದೇವಿಗೆ ನೈವೇದ್ಯ ಹಾಗೂ ವಿಶೇಷ ಅಲಂಕಾರ ಕಾರ್ಯಗಳ ಹಿನ್ನೆಲೆಯಲ್ಲಿ ಗರ್ಭಗುಡಿಯ ಬಾಗಿಲು ಮುಚ್ಚಲಾಗಿತ್ತು. ಮಧ್ಯರಾತ್ರಿ 12.30ರಿಂದ ಬೆಳಗ್ಗೆ 6 ಗಂಟೆಯವರೆಗೆ ದರ್ಶನಕ್ಕೆ ಅವಕಾಶ ಇರಲಿಲ್ಲ. ಹೀಗಾಗಿ ದೇವಿಯ ದರ್ಶನ ಪಡೆಯಲು ಭಕ್ತರು ರಾತ್ರಿಯಿಂದಲೇ ಸರತಿ ಸಾಲಿನಲ್ಲಿ ಕಾಯುತ್ತಿದ್ದರು.
ನೈವೇದ್ಯ ಮತ್ತು ಅಲಂಕಾರ ಕಾರ್ಯಗಳು ಪೂರ್ಣಗೊಂಡ ಬಳಿಕ ಇಂದು ಬೆಳಗ್ಗೆ 6 ಗಂಟೆಯಿಂದ ಮತ್ತೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ರಾತ್ರಿಯಿಂದ ಕಾಯುತ್ತಿದ್ದ ಭಕ್ತರು ಇದೀಗ ಹಂತ ಹಂತವಾಗಿ ದೇವಿಯ ದರ್ಶನ ಪಡೆಯುತ್ತಿದ್ದಾರೆ.
ಭಕ್ತರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಧರ್ಮದರ್ಶನದ ಸರತಿ ಸಾಲಿನ ಭಕ್ತರಿಗೆ ದರ್ಶನ ಪಡೆಯಲು ಹೆಚ್ಚಿನ ಸಮಯಾವಕಾಶ ಕಲ್ಪಿಸಲಾಗಿದೆ. ₹1,000 ಹಾಗೂ ₹300 ವಿಶೇಷ ದರ್ಶನದ ಸರತಿ ಸಾಲುಗಳಲ್ಲಿಯೂ ಭಕ್ತರ ಸಂಖ್ಯೆ ಹೆಚ್ಚಾಗಿದೆ.
ಇಂದು ಮಧ್ಯಾಹ್ನವೂ ದರ್ಶನ ಬಂದ್!
ಇಂದು (ನವೆಂಬರ್ 5) ಮಧ್ಯಾಹ್ನ 2 ಗಂಟೆಯಿಂದ 3.30ರವರೆಗೆ ಹಾಸನಾಂಬೆ ದೇವಿಗೆ ನೈವೇದ್ಯ ಸಮರ್ಪಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ಅವಧಿಯಲ್ಲಿ ಗರ್ಭಗುಡಿಯ ಬಾಗಿಲು ಮುಚ್ಚಲಾಗಲಿದ್ದು, ಭಕ್ತರಿಗೆ ತಾತ್ಕಾಲಿಕವಾಗಿ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಬಳಿಕ ಎಂದಿನಂತೆ ದರ್ಶನ ಮುಂದುವರಿಯಲಿದೆ.










