ವಾಲ್ಮೀಕಿ ನಿಗಮದ ಹಗರಣ ಮುಖ್ಯಮಂತ್ರಿಗಳೇ ಸ್ಪಷ್ಟಪಡಿಸಲಿ

0
Allegations of malfeasance in Valmiki Corporation
Spread the love

ವಿಜಯಸಾಕ್ಷಿ ಸುದ್ದಿ, ನವದೆಹಲಿ/ಹಾವೇರಿ : ವಾಲ್ಮೀಕಿ ನಿಗಮಕ್ಕೆ ಸಂಬಂಧಿಸಿದ ಸುಮಾರು 40 ಕೋಟಿ ರೂ. ಹಣ ನೇರವಾಗಿ ರಾಜ್ಯ ಸರ್ಕಾರದ ಖಜಾನೆಯಿಂದ ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆಯಾಗಿರುವ ಬಗ್ಗೆ ಮಾಹಿತಿ ಇದ್ದು, ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟೀಕರಣ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ, ಹಾವೇರಿ-ಗದಗ ಕ್ಷೇತ್ರದ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.

Advertisement

ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ನಿಗಮದ ಹಗರಣದ ಆಳ ಮತ್ತು ಅಗಲ ನೋಡಿದರೆ ಹೊಸ ಹೊಸ ತಿರುವುಗಳಿಗೆ ಕಾರಣವಾಗುತ್ತಿದೆ. ಇದಕ್ಕೆ ಅಂತ್ಯವೇ ಇಲ್ಲ ಎಂಬ ಭಾವನೆ, ಅಭಿಪ್ರಾಯ ವ್ಯಕ್ತವಾಗುತ್ತಿದೆ. ಈಗಾಗಲೇ ಹಲವಾರು ಬ್ಯಾಂಕ್ ಖಾತೆಗಳನ್ನು ತೆರೆದು ಹೈದರಾಬಾದ್‌ಗೆ ಹಣ ವರ್ಗಾವಣೆಯಾಗಿರುವ ಬಗ್ಗೆ ವಿವರಗಳು ಬೆಳಕಿಗೆ ಬಂದಿವೆ. ಆದರೆ, ಅದು ಹಣಕಾಸು ಇಲಾಖೆಗೆ ಸಂಬಂಧಿಸಿದ ವಿಷಯವಲ್ಲ ಎಂದು ಮುಖ್ಯಮಂತ್ರಿಗಳು ಹೇಳುತ್ತಾರೆ.

ಆದರೆ, ನಮಗೆ ಇತ್ತೀಚೆಗೆ ಒಂದು ಮಾಹಿತಿ ಬಂದಿದೆ. ಮಾರ್ಚ್ 31ರಂದು ನೇರವಾಗಿ ರಾಜ್ಯ ಸರ್ಕಾರದ ಖಜಾನೆಯಿಂದಲೇ ಸುಮಾರು 40 ಕೋಟಿ ರೂ. ಅಧಿಕೃತ ಖಾತೆಗೆ ಹೋಗದೇ ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆಯಾಗಿದೆ ಎಂಬ ಮಾಹಿತಿ ಇದೆ. ಇದು ಹೇಗೆ ಹೊರಗೆ ಬಂದಿದೆ ಎಂದರೆ, ಪೇಮೆಂಟ್ ಮಾಡಿರುವ ಚಲನ್ ಅನ್ನು ಕಂಪ್ಯೂಟರ್‌ನಿಂದ ತೆಗೆದು ಹಾಕುವ ಪ್ರಯತ್ನ ಮಾಡಲಾಗಿದೆ. ಆ ಹಿನ್ನೆಲೆಯಲ್ಲಿ ಖಜಾನೆಯಲ್ಲಿ ಸ್ವಲ್ಪ ಗಲಿಬಿಲಿಯಾಗಿದೆ. ಹೀಗಾಗಿ ಈ ವಿಷಯ ಹೊರಗೆ ಬಂದಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಗೋವಿಂದ ಕಾರಜೋಳ ಹಾಜರಿದ್ದರು.

ಮುಖ್ಯಮಂತ್ರಿಗಳು ಈ ಬಗ್ಗೆ ವಿಧಾನಸಭೆಯಲ್ಲಿ ಸ್ಪಷ್ಟೀಕರಣ ನೀಡಬೇಕು. ವಾಲ್ಮೀಕಿ ನಿಗಮಕ್ಕೆ ಎಷ್ಟು ಹಣ ಬಿಡುಗಡೆಯಾಗಿದೆ, ಮಾರ್ಚ್ 31ಕ್ಕೆ ಖಜಾನೆಯಿಂದ ಹಣ ಬಿಡುಗಡೆಯಾಗಿದೆಯಾ, ಬಿಡುಗಡೆಯಾಗಿದ್ದರೆ ಯಾವ ಯಾವ ಖಾತೆಗೆ ಬಿಡುಗಡೆಯಾಗಿದೆ, ಚಲನ್ ನಾಶ ಮಾಡುವ ಪ್ರಯತ್ನ ನಡೆದಿದೆಯೋ ಇಲ್ಲವೋ ಎನ್ನುವ ಬಗ್ಗೆ ಮುಖ್ಯಮಂತ್ರಿಗಳು ಸ್ಪಷ್ಟೀಕರಣ ನೀಡಬೇಕು ಎಂದು ಆಗ್ರಹ ವ್ಯಕ್ತಪಡಿಸಿದರು.

 


Spread the love

LEAVE A REPLY

Please enter your comment!
Please enter your name here