ಬೆಳಗಾವಿ: ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತದ ಪರಿಷ್ಕøತ ಅಂದಾಜು ಮೊತ್ತದ ಅನುಮೋದನೆ ಆದೇಶದಲ್ಲಿ, ಪುರ್ನವಸತಿ ಮತ್ತು ಪುನರ್ ನಿರ್ಮಾಣಕ್ಕಾಗಿ ರೂ.12,516.17 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಪುರ್ನವಸತಿ ಮತ್ತು ಪುನರ್ ನಿರ್ಮಾಣ ಕಲ್ಪಿಸುವ ಬದಲಾಗಿ ಪರಿಹಾರ ಪ್ಯಾಕೇಜ್ ನೀಡಲು ಅನುವಾಗುವಂತೆ ಪುರ್ನವಸತಿ ಮತ್ತು ಪುನರ್ ನಿರ್ಮಾಣದ ಪರ್ಯಾಯ ನೀತಿಯನ್ನು ರೂಪಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದಲ್ಲಿ ಮಂಗಳವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ವಿಜಯಪುರ ನಗರ ಶಾಸಕ ಬಸವನಗೌಡ ಆರ್ ಪಾಟೀಲ್ ಯತ್ನಾಳ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದರು. ಆಲಮಟ್ಟಿ ಅಣೆಕಟ್ಟನ್ನು 524ಮೀ ಹೆಚ್ಚಿಸಿದರೆ 188 ಗ್ರಾಮಗಳ 75,563 ಎಕರೆ ಜಮೀನು ಮುಳುಗಡೆಯಾಗುತ್ತದೆ.
ಈ ಪೈಕಿ 2,543 ಎಕರೆ ಜಮೀನನ್ನು ಭೂಸ್ವಾಧೀನಪಡಿಸಿಕೊಂಡು ಪರಿಹಾರ ವಿತರಿಸಲಾಗಿದೆ. ಮುಳಗಡೆ ಹೊಂದುವ 20 ಗ್ರಾಮಗಳು ಹಾಗೂ ಭಾಗಶಃ ಬಾಗಲಕೋಟೆ ಪಟ್ಟಣದ ಪುನರ್ ವಸತಿ ಮತ್ತು ಪುನರ್ ನಿರ್ಮಾಣಕ್ಕೆ ಒಟ್ಟಾರೆ 6,467 ಎಕರೆ ಜಮೀನು ಅವಶ್ಯಕತೆಯಿದೆ. ಬಾಕಿಯಿರುವ ಭೂಸ್ವಾಧೀನಕ್ಕೆ ಅಗತ್ಯವಿರುವ ವೆಚ್ಚ ಹಾಗೂ ಯೋಜನೆಯ 3ನೇ ಹಂತದ ವೆಚ್ಚವನ್ನು ಸರ್ಕಾರ ಮುಂಬರುವ ಆರ್ಥಿಕ ವರ್ಷಗಳ ಆಯವ್ಯಯದಲ್ಲಿ ಭರಿಸಲು ಕ್ರಮ ವಹಿಸಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಕೃಷ್ಣಾ ಮೇಲ್ದಂಡೆ ಯೋಜನೆ ಪ್ರಾರಂಭದಿಂದ ನವೆಂಬರ್-2025 ಅಂತ್ಯದವರೆಗೆ ಭೂಸ್ವಾಧೀನ ಪುನರ್ ವಸತಿ ಮತ್ತು ಪುನರ್ ನಿರ್ಮಾಣಕ್ಕೆ ರೂ.50,452.72 ಕೋಟಿ ವೆಚ್ಚ ಭರಿಸಲಾಗಿದೆ. ಯೋಜನೆಗೆ ಭೂ ಸ್ವಾಧೀನ ಸಂಬಂಧಿಸಿದಂತೆ 54,000 ಪ್ರಕರಣಗಳು ವಿವಿಧ ಹಂತದ ನ್ಯಾಯಾಲಯಗಳಲ್ಲಿ ವಿಚಾರಣೆ ಬಾಕಿಯಿವೆ.
ವಿಶೇಷ ಸಚಿವ ಸಂಪುಟ ಸಭೆಯ ನಿರ್ಣಯದಂತೆ 3ನೇ ಹಂತದ ಭೂಸ್ವಾಧೀನ ಆದೇಶದಲ್ಲಿ ಮುಳುಗಡೆಯಾಗುವ ಖುಷ್ಕಿ ಭೂಮಿಗೆ ರೂ.30 ಲಕ್ಷ, ತರಿ ಭೂಮಿಗೆ ರೂ.40 ಲಕ್ಷ, ಕಾಲುವೆ ಹಾದುಹೋಗುವ ಜಮೀನುಗಳಿಗೆ ಖುಷ್ಕಿ ಭೂಮಿಗೆ ರೂ.25 ಲಕ್ಷ, ತರಿ ಭೂಮಿಗೆ ರೂ.30 ಲಕ್ಷ ದರಗಳನ್ನು ನಿಗದಿಪಡಿಸಲಾಗಿದೆ. ಅನಗತ್ಯವಾಗಿ ಭೂ ಪರಿಹಾರದ ಧನವನ್ನು ಹೆಚ್ಚಳ ಮಾಡುವುದಕ್ಕೆ ಸರ್ಕಾರ ಆಸ್ಪದ ನೀಡುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು.



