ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಭಾರತ ಕಂಡ ಧೀಮಂತ ನಾಯಕ ಡಾ. ಬಿ.ಆರ್. ಅಂಬೇಡ್ಕರರನ್ನು ಸ್ಮರಿಸುವ ಸುಸಂದರ್ಭದ ದಿನ ಇದಾಗಿದೆ. ಅವರ ಸಮಾನತೆಯ ಸಂವಿಧಾನದ ಹಕ್ಕು ಎಲ್ಲ ವರ್ಗಕ್ಕೂ ಅನ್ವಯವಾಗಿದೆ ಎಂದು ರೋಣ ತಾಲೂಕಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಮಿಥುನ್ ಪಾಟೀಲ ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಶ್ರೀ ಹುಚ್ಚಿರೇಶ್ವರ ಅಸೋಸಿಯೇಷನ್ ನರೇಗಲ್ಲ ಇವರುಗಳ ಸಹಯೋಗದಲ್ಲಿ ಪಟ್ಟಣದ ದುರ್ಗಾ ಸರ್ಕಲ್ ಬಳಿ ಆಚರಿಸಲಾದ ಡಾ. ಅಂಬೇಡ್ಕರ್ ಮಹಾಪರಿನಿರ್ವಾಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡಾ. ಅಂಬೇಡ್ಕರ್ ತಮ್ಮ ಬಡತನವನ್ನು ಹಿಂದಿಕ್ಕಿ ದೇಶದ ಸಂವಿಧಾನದ ರೂಪುರೇಷೆಗಳನ್ನ ರಚಿಸಿದ ಪರಿಣಾಮ ಇಂದು ಹಿಂದುಳಿದ ಸಮಾಜಗಳು ಮುಖ್ಯವಾಹಿನಿಗೆ ಬರುವಲ್ಲಿ ಸಹಾಯಕವಾಗಿದೆ. ಅವರು ರಚಿಸಿದ ಸಂವಿಧಾನದ ಮಾರ್ಗಗಳ ಮೂಲಕ ಸಕಲರಿಗೂ ಸಕಲ ಸೌಲಭ್ಯಗಳು ದೊರಕಿದಂತಾಗಿದೆ ಎಂದರು.
ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಕ್ಷಯ ಪಾಟೀಲ ಮಾತನಾಡಿ, ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ 69ನೇ ಮಹಾ ಪರಿನಿರ್ವಾಣದ ಕಾರ್ಯಕ್ರಮದಲ್ಲಿ ಬಡವರಿಗೆ ರಗ್ಗು, ಹೊದಿಕೆಗಳನ್ನು ವಿತರಿಸುತ್ತಿರುವ ಗದಗ ಜಿಲ್ಲಾ ಕರವೇ ಅಧ್ಯಕ್ಷ ಹನಮಂತಪ್ಪ ಅಬ್ಬಿಗೇರಿಯವರು ಬಡವರ ಬದುಕು ಬೆಳಗುವಂತೆ ಮಾಡಿ ಡಾ. ಬಿ.ಆರ್. ಅಂಬೇಡ್ಕರರ ಸ್ಮರಣೆಯನ್ನು ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಶಿಕ್ಷಕ ಎಸ್.ವಿ. ಹಳ್ಳಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗದಗ ಜಿಲ್ಲಾ ಕರವೇ ಅಧ್ಯಕ್ಷ ಹನಮಂತಪ್ಪ ಅಬ್ಬಿಗೇರಿ ಅಧ್ಯಕ್ಷತೆ ವಹಿಸಿದ್ದರು. ಯಲ್ಲಪ್ಪ ಮಣ್ಣೊಡ್ಡರ ಉಪಸ್ಥಿತರಿದ್ದರು. ಬಡವರಿಗೆ ಹಾಗೂ ಅತ್ಯಂತ ಕ್ಲಿಷ್ಟಕರ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸುವ ಕರ್ನಾಟಕ ಗೃಹರಕ್ಷಕ ದಳದ ಸಿಬ್ಬಂದಿಗೆ ರಗ್ಗು, ಬೆಡ್‌ಶೀಟ್, ಹೊದಿಕೆಗಳನ್ನು ವಿತರಿಸಲಾಯಿತು. ಸತೀಶ ಮಾಳವಾಡ ನಿರೂಪಿಸಿ, ವಂದಿಸಿದರು.
ಸಮಾರಂಭದ ಸಾನ್ನಿಧ್ಯ ವಹಿದ್ದ ರೋಣ ಬೂದೀಶ್ವರ ಮಠದ ವಿಶ್ವನಾಥ ಸ್ವಾಮಿಗಳು ಮಾತನಾಡಿ, ಭಾರತ ಜಗತ್ತಿನಲ್ಲಿಯೇ ವಿಶಿಷ್ಠವಾದ ಸಂವಿಧಾನವನ್ನು ಹೊಂದಿದೆ. ಅದಕ್ಕೆ ಮೂಲ ಕಾರಣಕರ್ತರು ಡಾ. ಬಾಬಾ ಸಾಹೇಬ ಅಂಬೇಡ್ಕರರು. ಈ ದೇಶ ವಿವಿಧತೆಯಲ್ಲಿ ಏಕತೆಯನ್ನು ಕಾಣುವಂತೆ ಮಾಡಿ ವೈವಿಧ್ಯತೆಯ ರಾಷ್ಟ್ರವಾಗಿ ಹೊರಹೊಮ್ಮಲು ಕಾರಣರಾದ ಡಾ. ಅಂಬೇಡ್ಕರರ ಕೊಡುಗೆ ಸ್ಮರಣೀಯವಾಗಿದೆ ಎಂದರು.



