ವಿಜಯಸಾಕ್ಷಿ ಸುದ್ದಿ, ಗದಗ : ವಿದ್ಯಾರ್ಥಿಗಳು ವಿದ್ಯಾರ್ಥಿ ದಿಸೆಯಲ್ಲಿಯೇ ಹಿರಿಯರ ನುಡಿಗಳನ್ನು, ಶರಣರ ವಚನಗಳನ್ನು ಓದಿ ತಿಳಿದುಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಮಾರ್ಗದಲ್ಲಿ ನಡೆಯಬೇಕೆಂದು ಚಿಂತಕಿ ಸುಶೀಲಾ ಕೋಟಿ ಹೇಳಿದರು.
ಅವರು ಶುಕ್ರವಾರ ಗದಗ ಜಿಲ್ಲಾ ಅಕ್ಕಮಹಾದೇವಿ ಕದಳಿಶ್ರೀ ವೇದಿಕೆಯಿಂದ ನಗರದ ಸರ್ಕಾರಿ ಶಾಲೆ ನಂ. 10ರಲ್ಲಿ ನಡೆದ ಅಮೃತ ಭೋಜನ ಜ್ಞಾನಸಿಂಚನ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಿಸಿ ಮಾತನಾಡಿದರು.
ಪ್ರಾಸ್ತಾವಿಕವಾಗಿ ಬಿಆರ್ಪಿ ಪ್ರಕಾಶ ಮಂಗಳೂರು ಮಾತನಾಡಿ, ಕದಳಿಶ್ರೀ ವೇದಿಕೆಯಿಂದ ಸರಕಾರಿ ಶಾಲೆಗಳಲ್ಲಿ ಶ್ರಾವಣ ಮಾಸದಾದ್ಯಂತ ಹಮ್ಮಿಕೊಳ್ಳುವ ಅಮೃತಭೋಜನ ಜ್ಞಾನಸಿಂಚನ ಕಾರ್ಯಕ್ರಮವು ವಿಶಿಷ್ಠವಾಗಿದ್ದು, ವೇದಿಕೆಯ ಸದಸ್ಯರು ಸರಕಾರಿ ಶಾಲೆಗಳಿಗೆ ಆಗಮಿಸಿ ಮಕ್ಕಳಿಗೆ ಸಿಹಿಭೋಜನದೊಂದಿಗೆ ಕಲಿಕಾ ಸಾಮಗ್ರಿ ವಿತರಿಸಿ ವಚನ ಸಾಹಿತ್ಯವನ್ನು ತಿಳಿಸುವ ಕಾರ್ಯ ನಡೆಸುತ್ತಿರುವುದು ಅಭಿನಂದನೀಯ ಎಂದರು.
ಕದಳಿಶ್ರೀ ವೇದಿಕೆಯಿಂದ ಶರಣ ಸಂಸ್ಕೃತಿಯ ಚಿಂತಕರಾದ ಸುಮಾ ಪಾಟೀಲ, ಸಾಗರಿಕಾ ಅಕ್ಕಿ, ಹೇಮಾ ಪೊಂಗಾಲಿಯಾ ಹಾಗೂ ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಮನ್ವಯ ಅಧಿಕಾರಿ ಎಸ್.ಪಿ. ಪ್ರಭಯ್ಯನವ್ಮಠ, ಶರಣಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಡಾ.ರಾಧಿಕಾ ಕುಲಕರ್ಣಿ ಕೊಡಮಾಡಿದ ಅಂಗವಿಕಲ ಮಕ್ಕಳ ಕಿಟ್ನ್ನು ಹಾಗೂ ದಾನಿಗಳು ಕೊಡಮಾಡಿದ ಶಾಲಾ ಮಕ್ಕಳ ಕುರ್ಚಿ, ಟೇಬಲ್ ಹಾಗೂ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು.
ಶಿಕ್ಷಕಿಯರಾದ ಜಿ.ಎಸ್. ಜತ್ತಿ, ಎಸ್.ಆರ್. ಕುಲಕರ್ಣಿ ವಚನ ಪ್ರಾರ್ಥನೆಗೈದರು, ಸಂಪನ್ಮೂಲ ವ್ಯಕ್ತಿ ರವಿ ಹೆಬ್ಬಳಿ ಸ್ವಾಗತಿಸಿದರು. ವ್ಹಿ.ಟಿ. ದಾಸರಿ ಪರಿಚಯಿಸಿದರು. ಕೆ.ಎಸ್. ಬೇಲೇರಿ ನಿರೂಪಿಸಿದರು. ಮುಖ್ಯೋಪಾಧ್ಯಾಯ ಎಫ್.ಎ. ನಮಾಜಿ ವಂದಿಸಿದರು.
ಕಾರ್ಯಕ್ರಮದಲ್ಲಿ ಎಲ್.ಎಂ. ಗುಜ್ಜಾಯಿ, ಎ.ಎಸ್. ಸಿಂಗಟಾಲಕೇರಿ, ಎಸ್.ಎಸ್. ಗುತ್ತಿ, ಎನ್.ಎಸ್. ಕೋಟ್ನೇಕಲ್ಲ, ಡಿ.ಡಿ. ಹಳ್ಯಾಳ ಉಪಸ್ಥಿತರಿದ್ದರು.