ಯಶಸ್ಸಿಗೆ ನಿರಂತರ ಪರಿಶ್ರಮ ಬೇಕು : ಶಿವಾಚಾರ್ಯ ಹೊಸಳ್ಳಿಮಠ

0
Amrita Bhoja Gnanasincha program
Spread the love

ವಿಜಯಸಾಕ್ಷಿ ಸುದ್ದಿ, ಗದಗ : ವಿದ್ಯಾರ್ಥಿಗಳು ಕೌಶಲಗಳನ್ನು ವೃದ್ಧಿಸಿಕೊಳ್ಳುವ ಕಾರ್ಯದಲ್ಲಿ ತೊಡಗಬೇಕು. ಯಶಸ್ಸಿಗೆ ನಿರಂತರ ಪರಿಶ್ರಮ ಅವಶ್ಯ. ಹಿಂಜರಿಕೆಯನ್ನು ಬಿಟ್ಟು ಓದಿನಲ್ಲಿ ತೊಡಗಿಸಿಕೊಂಡು ಯಶಸ್ಸು ಸಾಧಿಸಬೇಕೆಂದು ಚಿಂತಕ ಶಿವಾಚಾರ್ಯ ಹೊಸಳ್ಳಿಮಠ ಹೇಳಿದರು.
ಅವರು ಗದಗ ಜಿಲ್ಲಾ ಅಕ್ಕಮಹಾದೇವಿ ಕದಳಿಶ್ರೀ ವೇದಿಕೆಯಿಂದ ಗದುಗಿನ ಗಂಗಿಮಡಿಯ ಸರಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಅಮೃತ ಭೋಜನ ಜ್ಞಾನಸಿಂಚನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಓದುವ ಹವ್ಯಾಸದಿಂದ ಜ್ಞಾನದ ವಿಕಾಸವಾಗುವದು. ಸ್ಪಷ್ಟ ಓದು ನಮ್ಮಲ್ಲಿ ಜ್ಞಾನದ ತಿಳುವಳಿಕೆಯನ್ನು ಹೆಚ್ಚಿಸುತ್ತದೆ. ಮಕ್ಕಳು ಉತ್ತಮ ಪುಸ್ತಕಗಳನ್ನು ಓದುವ ರೂಢಿ ಮಾಡಿಕೊಳ್ಳಬೇಕೆಂದರು.
ಮಕ್ಕಳಿಗೆ ಸಿಹಿಭೋಜನ ಉಣಬಡಿಸಿ ಮಾತನಾಡಿದ ಚಿಂತಕ ಖ್ವಾಜಮೈನುದ್ದೀನ್ ಜಾನಿಸಾಬ ಹಣಗಿ ಮಾತನಾಡಿ, ಪ್ರಾಥಮಿಕ ಹಂತದಲ್ಲಿ ಪಡೆಯುವ ಶಿಕ್ಷಣವು ಮುಂದಿನ ಉನ್ನತ ಭವಿಷ್ಯಕ್ಕೆ ದಾರಿದೀಪವಾಗುತ್ತದೆ. ನಮ್ಮ ಜೀವನದಲ್ಲಿ ಒಳ್ಳೆಯ ನಡತೆ, ಇತರರ ನೋವಿಗೆ ಸ್ಪಂದಿಸುವ ಸದ್ಗುಣಗಳನ್ನು ಬೆಳಸಿಕೊಳ್ಳಬೇಕೆಂದರು.
ಕಲಿಕಾ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದ ಚಿಂತಕ ಡಾ. ಎ.ಎನ್. ಶಾಲಗ್ಫರ, ಉತ್ತಮ ಬರವಣಿಗೆ, ಸಂವಹನ ಕೌಶಲ ಮಕ್ಕಳಿಗೆ ಅವಶ್ಯವಾಗಿದ್ದು, ಪ್ರತಿದಿನದ ಪತ್ರಿಕೆಗಳನ್ನು ಓದುವ ರೂಢಿ ಇದ್ದಲ್ಲಿ ಅದು ಹೆಚ್ಚಿನ ಜ್ಞಾನವನ್ನು ಬೆಳೆಸಿಕೊಳ್ಳಬಹುದು ಎಂದರು.
ಸಾಮಾಜಿಕ ಕಾರ್ಯಕರ್ತ ರಮೇಶ ತೋಟದ ಮಾತನಾಡಿ, ಆದರ್ಶ ವಿಚಾರಗಳನ್ನು, ಹಿರಿಯರ ನಾಣ್ನುಡಿಗಳನ್ನು ತಾಳ್ಮೆಯಿಂದ ಕೇಳುವದು, ಅವುಗಳನ್ನು ಪಾಲಿಸುವದು ಮಕ್ಕಳಿಗೆ ಅವಶ್ಯವಾಗಿದೆ ಎಂದರು.
ಗದಗ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಬಿ.ಕೆ. ಸಾವಿತ್ರಿ, ಬಿ.ಕೆ. ಮುತ್ತಕ್ಕ, ಬಿ.ಕೆ.ಜ್ಯೋತಿ ಅವರುಗಳು ರಕ್ಷಾ ಬಂಧನದ ಮಹತ್ವವನ್ನು ವಿವರಿಸಿದರು.
ಐ.ಡಿ. ಕಬ್ಬೇರಹಳ್ಳಿ, ಆರ್.ಬಿ. ಹಾದಿಮನಿ ವಚನ ಪ್ರಾರ್ಥನೆಗೈದರು. ಸಂಪನ್ಮೂಲ ವ್ಯಕ್ತಿ ಕೆ.ಎಸ್. ಬೇಲೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಜಿ. ಗಿರಿತಮ್ಮಣ್ಣವರ ಸ್ವಾಗತಿಸಿದರು. ವ್ಹಿ.ಆರ್. ಹಾಂಶಿ ನಿರೂಪಿಸಿದರು. ಸಿ.ಎಸ್. ಬೆಳಹಾರ ನಿರ್ವಹಿಸಿದರು. ಆರ್.ಡಿ. ಮುಗಜಿ ಪರಿಚಯಿಸಿದರು. ಜ್ಯೋತಿ ಅಂಗಡಿ ವಂದಿಸಿದರು.
ಕಾರ್ಯಕ್ರಮದಲ್ಲಿ ಅಲ್ತಾಫ ನದಾಫ್, ಗೀತಾ ಕುಸಬಿ, ಪಾಲಾಕ್ಷಿಬಾಯಿ ದಿವಟೆ, ಸುನೀತಾ ರಾಮದುರ್ಗ, ದೀಪಾ ಮುಂತಾದವರಿದ್ದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯೆ ರತ್ನಾ ಸಂಕಣ್ಣವರ, ಮಹಿಳಾ ಸಂಘಟನೆ ಕದಳಿಶ್ರೀ ವೇದಿಕೆಯು ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮ ಸಂಯೋಜಿಸಿ ಸಿಹಿಭೋಜನ, ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಅನುಕೂಲವಾಗುವ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸಿ ಮಾನವೀಯ ಮೌಲ್ಯ, ಪರಸ್ಪರ ಗೌರವ, ಹಿರಿಯ ಬಗೆಗೆ ಸಹಾನುಭೂತಿಯಂತಹ ಶರಣರ ಸಂದೇಶಗಳನ್ನು ಮಕ್ಕಳಿಗೆ ತಲುಪಿಸುವ ಕಾರ್ಯ ಮಾಡುತ್ತಿರುವದು ಶ್ಲಾಘನೀಯ ಎಂದರು.

Spread the love
Advertisement

LEAVE A REPLY

Please enter your comment!
Please enter your name here