ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಶಿಕ್ಷಣದ ವ್ಯವಸ್ಥೆ ಸಮರ್ಪಕವಾಗಿ ಸಾಗಬೇಕಾದರೆ ಸಮುದಾಯದ ಪಾಲ್ಗೊಳ್ಳುವಿಕೆ ಬಹಳಷ್ಟು ಮುಖ್ಯವಾಗಿದೆ. ದಾನಿಗಳಿಂದ ದಾನವನ್ನು ಪಡೆದು ನಿಮಗೆ ಒಂದು ತಿಂಗಳ ಪರ್ಯಂತ ಸಿಹಿ ಊಟದ ಅಮೃತ ಭೋಜನವನ್ನು ಏರ್ಪಡಿಸಿರುವ ನಿಮ್ಮ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿಯವರು ನಿಜಕ್ಕೂ ಅಭಿನಂದನಾರ್ಹರು. ಸಿಹಿಯೂಟ ಸ್ವೀಕರಿಸಿರುವ ನಿಮ್ಮ ಬಾಳು ಸಹ ಅಮೃತ ಭೋಜನದಷ್ಟೇ ಸಿಹಿಯಾಗಿರಲಿ ಎಂದು ಜಮಖಂಡಿ ಸಿಟಿಇಯ ರೀಡರ್ ಡಿ.ಐ. ಅಸುಂಡಿ ಅಭಿಪ್ರಾಯಪಟ್ಟರು.
ಪಟ್ಟಣದ ಕೆ.ಜಿ.ಎಮ್.ಎಸ್ ಶಾಲೆಯಲ್ಲಿ ಶ್ರಾವಣ ಮಾಸದ ಪರ್ಯಂತ ಸಾಗಿಬಂದ ಅಮೃತ ಭೋಜನ ಕಾರ್ಯಕ್ರಮದ ಮುಕ್ತಾಯ ಸಮಾರಂಭ ಮತ್ತು ದಾನಿಗಳ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣಕ್ಕಾಗಿ ಸರಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಸರಕಾರದೊಂದಿಗೆ ಸಾರ್ವಜನಿಕರೂ ಕೈಜೋಡಿಸಿದಾಗ ಉತ್ತಮ ಗುಣಮಟ್ಟದ ಶಿಕ್ಷಣ ದೊರಕಲು ಸಾಧ್ಯವಾಗುತ್ತದೆ. ಇಂದಿನ ದಿನಗಳಲ್ಲಿ ಸರಕಾರಿ ಶಾಲೆಗಳೂ ಸಹ ಖಾಸಗಿ ಶಾಲೆಗಳಿಗಿಂತ ಕಡಿಮೆ ಇಲ್ಲದಂತೆ ಕಾರ್ಯ ನಿರ್ವಹಿಸುತ್ತಿವೆ. ಇದರಿಂದ ಅಲ್ಲಿ ದಾಖಲಾತಿ ಮತ್ತು ಹಾಜರಾತಿ ಖಂಡಿತವಾಗಿಯೂ ಹೆಚ್ಚಾಗುತ್ತದೆ. ಈ ಕಾರ್ಯ ಎಂದಿಗೂ ಹೀಗೆಯೇ ಮುಂದುವರೆಯಲಿ ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂಸಿ ಅಧ್ಯಕ್ಷ ಆನಂದ ಕೊಟಗಿ ಮಾತನಾಡಿ, ನಮ್ಮ ಶಾಲೆಯ ಎಲ್ಲ ಶಿಕ್ಷಕ ಬಳಗವೂ ಅತ್ಯಂತ ಅಚ್ಚುಕಟ್ಟುತನದಿಂದ ಕಾರ್ಯ ನಿರ್ವಹಿಸುತ್ತಿದೆ. ಹೀಗಾಗಿ ಇಲ್ಲಿ ಕಳೆದ ಮೂರು ವರ್ಷಗಳಿಂದ ಅಮೃತ ಭೋಜನ ಕಾರ್ಯಕ್ರಮ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ. ಇದರೊಂದಿಗೆ ಪಾಠ ಪ್ರವಚನಗಳಲ್ಲಿಯೂ ಶಾಲೆ ಉತ್ತಮ ಸಾಧನೆ ತೋರುತ್ತಿರುವದರಿಂದ ಪಾಲಕರು ಈ ಶಾಲೆಯ ಕಡೆಗೆ ಆಕರ್ಷಿತರಾಗಿದ್ದು, ವರ್ಷದಿಂದ ವರ್ಷಕ್ಕೆ ಶಾಲೆಯ ದಾಖಲಾತಿ ಹೆಚ್ಚಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಲೆಗೆ ವಿವಿಧ ವಸ್ತು ರೂಪದಲ್ಲಿ ದಾನಿಗಳನ್ನು ಮತ್ತು ಅಮೃತ ಭೋಜನದ ದಾನಿಗಳನ್ನು ಸನ್ಮಾನಿಸಲಾಯಿತು. ಮುಖ್ಯ ಶಿಕ್ಷಕ ಬಿ.ಬಿ. ಕುರಿ ಪ್ರಾಸ್ತಾವಿಕವಾಗಿ ಮಾತನಾಡಿ, ಎಲ್ಲ ದಾನಿಗಳನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ದಾನಿಗಳಾದ ಸುನೀಲ ವಸ್ತçದ, ಶೇಕಪ್ಪ ಕೆಂಗಾರ, ಸಂತೋಷ ಬಸರಿಗಿಡದ, ಬಸವರಾಜ ಮಾಳವಾಡ, ನಿರ್ಮಲಾ ಸೂಡಿ, ಸಿಆರ್‌ಪಿ ಜ್ಯೋತಿ ಬೇಲೇರಿ, ಉಪಾಧ್ಯಕ್ಷೆ ರೇಣುಕಾ ಜೋಗಿ ಸೇರಿದಂತೆ ಶಾಲಾ ಮೇಲುಸ್ತುವಾರಿ ಸಮಿತಿಯ ಸದಸ್ಯರು, ಸಿಬ್ಬಂದಿಯವರಾದ ಎನ್.ಎಲ್. ಚವ್ಹಾಣ, ಎಂ.ಪಿ. ಅಣಗೌಡರ, ಡಿ.ವಿ. ಕಳ್ಳಿ, ಜೆ.ಎ. ಪಾಟೀಲ, ಎಂ.ಎಸ್. ಮಾಳಶೆಟ್ಟಿ, ಎಸ್.ಐ. ಜಗಾಪೂರ, ರಾಜೇಶ್ವರಿ ತೊಂಡಿಹಾಳ, ಎಚ್.ಎಫ್. ಕಡ್ಲಿಮಟ್ಟಿ, ಬಿ.ಡಿ. ಹಳ್ಳದಮನಿ, ಸಾರ್ವಜನಿಕರು ಪಾಲ್ಗೊಂಡಿದ್ದರು.
ನಿವೃತ್ತ ಮುಖ್ಯ ಶಿಕ್ಷಕ ಅರುಣ ಬಿ.ಕುಲಕರ್ಣಿ ಮಾತನಾಡಿ, ನಿಮ್ಮ ಭವಿಷ್ಯವನ್ನು ಉತ್ತಮಪಡಿಸುವುದಕ್ಕಾಗಿ ಮನೆಯಲ್ಲಿ ನಿಮ್ಮ ತಂದೆ-ತಾಯಿ ಮತ್ತು ಸಮಾಜದಲ್ಲಿ ಸಾರ್ವಜನಿಕರು ಸಾಕಷ್ಟು ಶ್ರಮ ವಹಿಸುತ್ತಿದ್ದಾರೆ. ಅವರ ಶ್ರಮ ನಿರರ್ಥಕವಾಗದಂತೆ ನೋಡಿಕೊಳ್ಳಬೇಕಾದುದು ನಿಮ್ಮೆಲ್ಲರ ಜವಾಬ್ದಾರಿಯಾಗಿದೆ. ಮನೆಯಲ್ಲಿ ನಿಮ್ಮ ತಂದೆ-ತಾಯಿಗಳ ಮಾತುಗಳನ್ನು, ಶಾಲೆಯಲ್ಲಿ ಸಮಾಜದಲ್ಲಿ ಗುರು-ಹಿರಿಯರ ಮಾತುಗಳನ್ನು ಕೇಳುವ ಮಕ್ಕಳು ನೀವಾಗಬೇಕು. ಇದರಿಂದ ನಿಮ್ಮ ಜೀವನ ಉಜ್ವಲವಾಗುತ್ತದೆ. ಹಿರಿಯರ, ಶಿಕ್ಷಕರ ಅನುಭವದ ಮಾತುಗಳು ನಿಮ್ಮ ಜೀವನಕ್ಕೆ ದಾರಿದೀಪವಾಗುತ್ತವೆ. ನಿಮಗೆ ಕೇವಲ ಕಲಿಕೆ ಅಷ್ಟೇ ಮುಖ್ಯವಾಗಬಾರದು. ಅದರೊಂದಿಗೆ ನೀವು ನಿಮ್ಮಲ್ಲಿ ಮಾನವೀಯ ಮೌಲ್ಯಗಳನ್ನೂ ಬೆಳೆಸಿಕೊಳ್ಳಿ. ಅಮೃತ ಭೋಜನವನ್ನು ಸವಿದಿರುವ ನಿಮ್ಮ ಜೀವನ ಅಮೃತದಷ್ಟೇ ಸಿಹಿಯಾಗಿರಲಿ ಎಂದು ಹಾರೈಸಿದರು.