ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಪಟ್ಟಣದ ಶ್ರೀ ದತ್ತಾತ್ರೇಯ ದೇವಸ್ಥಾನದ ಓಣಿಯಲ್ಲೊಂದು ಪುರಾತನ ಕಾಲದ ಪುಷ್ಕರಣಿಯಿದೆ. ಅದನ್ನು ಈಗ ಹಾಳು ಬಾವಿ ಎಂದು ಕರೆಯಲಾಗುತ್ತದೆ. ದೊಡ್ಡದಾಗಿರುವ ಈ ಬಾವಿಯಲ್ಲಿ ನೀರನ್ನು ಬಿಟ್ಟು ಉಳಿದಂತೆ ಉರಿನ ಕಸ ಕಡ್ಡಿ, ಹೊಲಸು ಎಲ್ಲವನ್ನೂ ಸಾರ್ವಜನಿಕರು ತಂದು ಸುರಿಯುತ್ತಿದ್ದಾರೆ. ಹೀಗಾಗಿ ಈ ಪುಷ್ಕರಣಿ ಇಂದು ಹಾಳು ಬಾವಿಯೆಂದು ಕರೆಯಿಸಿಕೊಳ್ಳುತ್ತಿದೆ.
ಈ ಹಾಳು ಬಾವಿಗೊಂದು ಇತಿಹಾಸವಿದೆ. ಈ ಬಾವಿಯ ಸಮೀಪದಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ಸೋಮೇಶ್ವರನ ದೇವಸ್ಥಾನವೊಂದಿದೆ. ಈ ದೇವಸ್ಥಾನದ ಪೂಜೆಗಾಗಿ ಬಳಸಲು ನೀರಿಗಾಗಿ ಈ ಪುಷ್ಕರಣಿಯನ್ನು ನಿರ್ಮಾಣ ಮಾಡಲಾಗಿತ್ತೆಂಬುದನ್ನು ಇತಿಹಾಸ ತಿಳಿಸುತ್ತದೆ. ಆದರೆ ಕಾಲಾನುಕ್ರಮದಲ್ಲಿ ಪುಷ್ಕರಣಿ ಹೋಗಿ ಹಾಳು ಬಾವಿಯಾಗಿರುವುದು ಇಡೀ ಊರಿನ ದುರ್ದೈವ. ಈ ಬಗ್ಗೆ ಕರ್ನಾಟಕ ಸರಕಾರದ ಪ್ರಾಚ್ಯ ಇಲಾಖೆಯೂ ಸಹ ಯಾವ ಕ್ರಮವನ್ನೂ ತೆಗೆದುಕೊಳ್ಳುತ್ತಿಲ್ಲ ಎಂಬುದು ಸಾರ್ವಜನಿಕರ ಅಳಲು.
ಈ ಪುಷ್ಕರಣಿಯ ಎದುರಿಗೆ ನರೇಗಲ್ಲ ಪಟ್ಟಣದ ಜನರ ಆರಾಧ್ಯ ದೈವವಾಗಿರುವ ಶ್ರೀ ದತ್ತಾತ್ರೇಯ ದೇವಸ್ಥಾನವಿದೆ. ಇಲ್ಲಿ ಪ್ರತಿದಿನವೂ ಒಂದಿಲ್ಲೊಂದು ಧಾರ್ಮಿಕ ಕಾರ್ಯಗಳು, ಮದುವೆ, ಮುಂಜಿಯಂತಹ ಅನೇಕ ಶುಭ ಕಾರ್ಯಗಳು ನಡೆಯುತ್ತಿವೆ. ಆದರೆ ಈ ಬಾವಿಯಲ್ಲಿನ ಹೊಲಸು ಮತ್ತು ದಂಡೆಯಲ್ಲಿರುವ ಶೌಚಾಲಯಗಳು ಸದಾಕಾಲ ದುರ್ನಾತ ಬೀರುತ್ತಿದ್ದು, ದೇವಸ್ಥಾನಕ್ಕೆ ಬರುವ ಭಕ್ತರಿಗೆ ಇನ್ನಿಲ್ಲದ ಕಿರಿಕಿರಿಯನ್ನುಂಟು ಮಾಡುತ್ತಿದೆ.
ಇದರಿಂದ ಸುತ್ತಲಿನ ನಾಗರಿಕರಿಗೆ ನಿತ್ಯವೂ ನರಕ ದರ್ಶನವಾಗುತ್ತಿದೆ. ಪಟ್ಟಣ ಪಂಚಾಯತಿ ಗಮನಕ್ಕೆ ಇದನ್ನು ತಂದಾಗ ಮುಖ್ಯಾಧಿಕಾರಿ ಮಹೇಶ ನಿಡಶೇಸಿ ತಮ್ಮ ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ಬಂದು ವೀಕ್ಷಿಸಿದರು.
ಇದು ನಿಜಕ್ಕೂ ಸಾರ್ವಜನಿಕರಿಗೆ ತೊಂದರೆದಾಯಕ ಸ್ಥಿತಿಯಾಗಿದೆ. ಇದನ್ನು ಆದಷ್ಟು ಬೇಗನೆ ದುರಸ್ತಿಪಡಿಸಲಾಗುವುದು. 15ನೇ ಹಣಕಾಸು ಯೋಜನೆಯಡಿಯಲ್ಲಿ ಇದಕ್ಕಾಗಿ 8.5 ಲಕ್ಷ ರೂಪಾಯಿಗಳನ್ನು ತೆಗೆದಿರಿಸಲಾಗಿದ್ದು, ಶೀಘ್ರವೇ ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತೇವೆ
-ಮಹೇಶ ನಿಡಶೇಸಿ.
ಮುಖ್ಯಾಧಿಕಾರಿ, ಪ.ಪಂ. ನರೇಗಲ್ಲ.