ಬೆಂಗಳೂರು: ಮನೆ ಮಾಲೀಕನ ನಿರ್ಲಕ್ಷ್ಯಕ್ಕೆ 11 ತಿಂಗಳ ಮಗು ಬಲಿಯಾಗಿರುವ ಘಟನೆ ಗೊಲ್ಲರಹಟ್ಟಿಯ ನೈಸ್ ರೋಡ್ ಜಂಕ್ಷನ್ ಬಳಿ ನಡೆದಿದೆ. ಅಝಾನ್ ಮೃತ ಮಗುವಾಗಿದ್ದು, ಮನೆ ಮಾಲೀಕ ಬಾಡಿಗೆ ಮನೆಯಲ್ಲಿದ್ದ ಮಗು ಮೇಲೆ ಕಾರು ಹರಿಸಿದ್ದಾನೆ.
ಬಾಡಿಗೆಗೆ ಇದ್ದ ನಿವಾಸಿಗಳ ಮಗುವಾದ ಅಝಾನ್ ಮನೆಯ ಹೊರಭಾಗದಲ್ಲಿ ಆಟ ಆಡುವಾಗ ಮನೆಯ ಪಾರ್ಕಿಂಗ್ ಸ್ಥಳದಿಂದ ರಿವರ್ಸ್ ತೆಗೆಯಲು ಮನೆ ಮಾಲೀಕ ಮಗುವಿನ ಉಪಸ್ಥಿತಿಯನ್ನು ಗಮನಿಸಲಿಲ್ಲ. ಕಾರು ಹಿಂದಿನ ದಿಕ್ಕಿನಲ್ಲಿ ಚಲಿಸುತ್ತಿದ್ದಾಗ ಮಗು ಕಾರಿನಡಿಯಲ್ಲಿ ಸಿಕ್ಕಿತು. ಸ್ಥಳೀಯರು ಗದ್ದಲ ಕೇಳಿ ಓಡಿ ಬಂದು ಕಾರನ್ನು ತಡೆದು, ಮಗುವನ್ನು ಹೊರತೆಗೆದರು. ಆದರೆ, ತಲೆಗೆ ಗಂಭೀರ ಗಾಯಗಳಾಗಿ ಮಗು ಸ್ಥಳದಲ್ಲೇ ಮೃತಪಟ್ಟಿತ್ತು.
ಇನ್ನೂ ಕೇವಲ 11 ತಿಂಗಳ ಮಗುವನ್ನು ಕಳೆದುಕೊಂಡು ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.