ಬೆಂಗಳೂರು: ಮಾದಾವರ-ತುಮಕೂರು ಮೆಟ್ರೋ ರೈಲು ಯೋಜನೆಗೆ ಸಂಬಂಧಿಸಿದಂತೆ ಸಿದ್ಧಪಡಿಸಲಾದ ವಿವರವಾದ ಯೋಜನಾ ವರದಿ (DPR)ಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ.
ವಿಧಾನಸೌಧದಲ್ಲಿ ನಿನ್ನೆ ಸಂಜೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಡಿಪಿಆರ್ ವರದಿಯನ್ನು ಅಧಿಕೃತವಾಗಿ ಸ್ವೀಕರಿಸಿದರು. ಈ ಯೋಜನೆ ಕುರಿತು ಮುಂದಿನ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ.
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಸಂಸ್ಥೆಯು ಡಿಪಿಆರ್ ಸಿದ್ಧಪಡಿಸಿದ್ದು, ಯೋಜನೆಗೆ ಸಂಬಂಧಿಸಿದಂತೆ ಮುಂದಿನ ಹಂತದ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿದೆ.
ಈ ಕುರಿತು ಮಾತನಾಡಿದ ಡಾ. ಪರಮೇಶ್ವರ್, “ತುಮಕೂರಿಗೆ ಮೆಟ್ರೋ ರೈಲು ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಹಲವು ವರ್ಷಗಳಿಂದ ಪ್ರಯತ್ನಗಳು ನಡೆಯುತ್ತಿವೆ. ಕಳೆದ ಬಜೆಟ್‌ನಲ್ಲಿ ಮುಖ್ಯಮಂತ್ರಿ ಫೀಸಿಬಿಲಿಟಿ ಅಧ್ಯಯನ ನಡೆಸುವುದಾಗಿ ಘೋಷಿಸಿದ್ದರು” ಎಂದು ಹೇಳಿದರು.
“ಹೈದರಾಬಾದ್ ಮೂಲದ ಸಂಸ್ಥೆಯೊಂದರಿಂದ ₹3.5 ಕೋಟಿ ವೆಚ್ಚದಲ್ಲಿ ಕಾರ್ಯಸಾಧ್ಯತಾ ವರದಿ ಪಡೆಯಲಾಗಿದೆ. ಆ ವರದಿಯಲ್ಲಿ ಮಾದಾವರದಿಂದ ತುಮಕೂರುವರೆಗೆ ಮೆಟ್ರೋ ಯೋಜನೆ ಜಾರಿಗೆ ತರಬಹುದು ಎಂದು ಶಿಫಾರಸು ಮಾಡಲಾಗಿದೆ” ಎಂದು ಮಾಹಿತಿ ನೀಡಿದರು.
ಅದರ ನಂತರ ಡಿಪಿಆರ್ ಸಿದ್ಧಪಡಿಸಲು ಟೆಂಡರ್ ನೀಡಲಾಗಿದ್ದು, ಮೆಟ್ರೋ ಸಂಸ್ಥೆಯ ಮೂಲಕ ಮತ್ತೊಂದು ಏಜೆನ್ಸಿಯಿಂದ ವಿವರವಾದ ಯೋಜನಾ ವರದಿ ತಯಾರಿಸಲಾಗಿದೆ ಎಂದು ತಿಳಿಸಿದ್ದಾರೆ.
ಯೋಜನೆಯನ್ನು ಪಿಪಿಪಿ (Public-Private Partnership) ಮಾದರಿಯಲ್ಲಿ ಜಾರಿಗೊಳಿಸುವ ಉದ್ದೇಶವಿದ್ದು, ಡಿಪಿಆರ್ ಪ್ರಕಾರ ಯೋಜನೆಗೆ ಸುಮಾರು ₹20 ಸಾವಿರ ಕೋಟಿ ವೆಚ್ಚ ಅಂದಾಜಿಸಲಾಗಿದೆ ಎಂದು ಹೇಳಿದ್ದಾರೆ.
“ಈ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಬಳಿಕ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗುತ್ತದೆ” ಎಂದು ಪರಮೇಶ್ವರ್ ತಿಳಿಸಿದ್ದಾರೆ.



