ವಿಜಯಸಾಕ್ಷಿ ಸುದ್ದಿ, ಗದಗ : ಅನಿಲ ಮೆಣಸಿನಕಾಯಿ ಗದಗ ಕ್ಷೇತ್ರದಲ್ಲಿ ಜನೋಪಯೋಗಿ ಕೆಲಸಗಳನ್ನು ಮಾಡಿದ್ದಾರೆ. ಸಮಾನತೆಗಾಗಿ ಅವರ ಹೊಂದಿರುವ ದೂರದೃಷ್ಟಿ ಸಮಾಜಕ್ಕೆ ಉತ್ತಮ ಸಂದೇಶ ನೀಡಲಿದೆ.
ಅನಿಲ್ ಮೆಣಸಿನಕಾಯಿ ಕೆಲಸಕ್ಕೆ ನಾನು ಸದಾ ಬೆಂಬಲವಾಗಿ ಇರುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ, ಹಾವೇರಿ-ಗದಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.
ಭಾನುವಾರ ರಾತ್ರಿ ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಅವರ ನಿವಾಸದಲ್ಲಿ ಸಮಾನತೆಯ ಮಂದಿರ ಪ್ರತಿಷ್ಠಾಪನೆ ಅಂಗವಾಗಿ ನಡೆದ ಸಮಾನತೆಯ ಜಾಥಾ ಸಮಾರೋಪ ಹಾಗೂ ಶ್ರೀರಾಮ, ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಸಂತ ಶಿಶುನಾಳ ಶರೀಫರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಮಾತನಾಡಿ, ಸರ್ವರಿಗೂ ಸಮಬಾಳು ಎಂಬ ಆಶಯದೊಂದಿಗೆ ಕುರ್ತಕೋಟಿ ಗ್ರಾಮದಲ್ಲಿ ಸಮಾನತೆಯ ಮಂದಿರ ನಿರ್ಮಾಣದ ಸಂಕಲ್ಪ ಮಾಡಿದ್ದೇವೆ. ಈ ಹಿನ್ನೆಲೆಯಲ್ಲಿ ಮನುಕುಲಕ್ಕಾಗಿ, ಮನುಕುಲದ ಸಮಾನತೆಗಾಗಿ ಈ ಬೃಹತ್ ಜಾಥಾ ಮತ್ತು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗದಗ ಭಾವೈಕ್ಯತೆ ಹೊಂದಿರುವ ಜಿಲ್ಲೆ. ಇಲ್ಲಿನ ಜನರು ಜಾತಿ, ಮತ, ಪಂಥ ಮರೆತು ಮನುಷ್ಯರಾಗಿ ಬದುಕಬೇಕು ಎಂಬ ಭಾವನೆ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಸಮಾನತೆಯ ಸಂದೇಶ ಸಾರಿದ ಶ್ರೀರಾಮ, ಅಂಬೇಡ್ಕರ್, ಬುದ್ಧ, ಬಸವ ಮತ್ತು ಶರೀಫರ ಮಂದಿರಗಳನ್ನು ಜಿಲ್ಲೆಯ ಕುರ್ತಕೋಟಿ ಗ್ರಾಮದಲ್ಲಿ ನಿರ್ಮಿಸಲಾಗುವುದು ಎಂದರು.
ಸಮಾರಂಭದಲ್ಲಿ ನರಗುಂದ ಶಾಸಕ ಸಿ.ಸಿ. ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ, ಬಿಜೆಪಿ ಮುಖಂಡರಾದ ಕಾಂತಿಲಾಲ್ ಬನ್ಸಾಲಿ ಮುಂತಾದವರು ಉಪಸ್ಥಿತರಿದ್ದರು.
ಬಿಜೆಪಿ ಸಮಾನತೆಗಾಗಿಯೇ ಜನ್ಮತಾಳಿದ ಪಕ್ಷ. ಆದರೆ, ಕಾಂಗ್ರೆಸ್ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನೀಡಿದ ಪೊಳ್ಳು ಭರವಸೆಗಳಿಗೆ ಮತದಾರರು ಮರುಳಾಗಬೇಡಿ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.