ಇಲ್ಲದ ತಪ್ಪಿಗೆ ಇದೆಂತಾ ಯಾತನೆ..?

0
Anjali Ambigera murder case
Spread the love

ವಿಜಯಸಾಕ್ಷಿ ಸುದ್ದಿ, ಮುಳಗುಂದ : ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಹುಬ್ಬಳ್ಳಿಯ ಅಂಜಲಿ ಅಂಬಿಗೇರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರೂರ ಆರೋಪಿ ವಿಶ್ವನಾಥ ಅಲಿಯಾಸ ಗಿರೀಶ ಸಾವಂತ ರೈಲಿನಲ್ಲಿ ಪರಾರಿಯಾಗುತ್ತಿದ್ದ ಸಂದರ್ಭದಲ್ಲಿ ಗದಗ ತಾಲೂಕಿನ ಮುಳಗುಂದ ಪಟ್ಟಣದ ಮಹಿಳೆಯೋರ್ವರಿಗೆ ಚಾಕು ಇರಿದ ಘಟನೆ ದಾವಣಗೆರೆ ಸಮಿಪ ನಡೆದಿದೆ.

Anjali Ambigera murder case

ಮುಳಗುಂದ ಪಟ್ಟಣದ ಮಹಾಂತೇಶ ವೀರಭದ್ರಪ್ಪ ಸೊರಟೂರ ಇವರ ಪತ್ನಿ ಲಕ್ಷ್ಮಿ(29) ತನ್ನ ಪತಿ ಹಾಗೂ ಮಗನ ಸಮೇತ ತುಮಕೂರು ಸಿದ್ಧಗಂಗಾ ಶಿಕ್ಷಣ ಸಂಸ್ಥೆಯಲ್ಲಿ ಶಾಲಾ ದಾಖಲಾತಿಗಾಗಿ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಸಂದರ್ಭದಲ್ಲಿ ಮಧ್ಯಾಹ್ನ 2.30ರ ಸುಮಾರಿಗೆ ಮಹಿಳೆಯ ಜೊತೆ ಅನುಚಿತವಾಗಿ ವರ್ತಿಸಿದ್ದಲ್ಲದೆ, ಕೈಗೆ ಚಾಕುವಿನಿಂದ ಇರಿದಿದ್ದಾನೆ. ಸ್ಥಳದಲ್ಲಿಯೇ ತೀರ್ವ ಅಸ್ವಸ್ಥಗೊಂಡ ಲಕ್ಷ್ಮಿ ಅವರನ್ನು ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಿಕ್ಕಿಬಿದ್ದ ಆರೋಪಿ ಗಿರೀಶ: ಹುಬ್ಬಳ್ಳಿಯಲ್ಲಿ ಯುವತಿಯನ್ನು ಕೊಂದ ಗಿರೀಶ ರೈಲಿನ ಮೂಲಕ ಹುಬ್ಬಳ್ಳಿಯಿಂದ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಮಹಿಳೆಯ ಕೈಗೆ ಚಾಕು ಇರಿದ ಸಂದರ್ಭದಲ್ಲಿ ಮಹಿಳೆಯ ಪತಿ ಪ್ರತಿರೋಧ ಒಡ್ಡಿದ ಕಾರಣಕ್ಕೆ ಬೇರೆ ಬೋಗಿಗೆ ಕಾಲ್ಕಿತ್ತಿದ್ದಾನೆ. ಘಟನೆಯ ಕುರಿತು ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಿ, ದಾವಣಗೆರೆ ರೈಲು ನಿಲ್ದಾಣದಲ್ಲಿ ಆರೋಪಿಯನ್ನು ವಶಕ್ಕೆ ಪಡೆದ ನಂತರವಷ್ಟೇ ಈತ ಹುಬ್ಬಳ್ಳಿಯಲ್ಲಿ ಅಂಜಲಿಯನ್ನು ಹತ್ಯೆ ಮಾಡಿದ ಆರೋಪಿ ಎಂದು ಪತ್ತೆಯಾಗಿದೆ.

ಮಹಿಳೆ ಆಸ್ಪತ್ರಗೆ ದಾಖಲು: ರೈಲಿನಲ್ಲಿ ಹಲ್ಲೆಗೊಳಲಾದ ಲಕ್ಷ್ಮಿ ದಾವಣಗೆರೆಯ ಯಶಸ್ವಿನಿ ಆಸ್ಪತೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಅಂಜಲಿ ಹತ್ಯೆಯ ನಂತರ ಮಾನಸಿಕ ಸ್ಥಿಮಿತ ಕಳೆದುಕೊಂಡವನಂತೆ ವರ್ತಿಸಿ, ಬಡ ಕುಟುಂಬದ ಅಮಾಯಕ ಮಹಿಳೆಗೆ ಚಾಕು ಇರಿದು ಗಾಯಗೊಳಿಸಿದ ಘಟನೆಗೆ ಕುಟುಂಬಸ್ಥರು ಕಣ್ಣೀರು ಹಾಕುವಂತಾಗಿದೆ.

ಯಲವಿಗಿ ರೈಲು ನಿಲ್ದಾಣದಿಂದ ತುಮಕೂರಿಗೆ ಪ್ರಯಾಣಿಸುತ್ತಿದ್ದ ದಂಪತಿ ಗಿರೀಶನ ಅಮಾನವೀಯ ಕೃತ್ಯದಿಂದ ಸಂಕಷ್ಟ ಎದುರಿಸುವಂತಾಗಿದ್ದು, ಕೂಲಿ-ನಾಲಿ ಮಾಡಿ ಜೀವನ ನಡೆಸುತ್ತಿದ್ದ ದಂಪತಿ ಈಗ ತಮ್ಮದಲ್ಲದ ತಪ್ಪಿಗೆ ಪರಿತಪಿಸುವಂತಾಗಿದೆ. ಸದ್ಯ ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಮಹಿಳೆ ಶಸ್ತç ಚಿಕಿತ್ಸೆಗೆ ಒಳಗಾಗಿದ್ದು, ಆಸ್ಪತ್ರೆಯ ಶುಲ್ಕ ತುಂಬಲೂ ಹಣ ಇಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ನನ್ನ ಹೆಂಡತಿಯ ಜೊತೆ ಅನುಚಿತವಾಗಿ ವರ್ತಿಸಿದ್ದರಿಂದ ಸಿಟ್ಟಿಗೆದ್ದು ಬೈದಾಡಿದ್ದಾಳೆ. ಕೂಡಲೇ ತನ್ನ ಬಳಿಯಿದ್ದ ಚಾಕುವಿನಿಂದ ನನ್ನ ಹೆಂಡತಿಗೆ ಹಲ್ಲೆ ಮಾಡಿದ್ದಾನೆ.

ರೈಲಿನಲ್ಲಿ ಹೆಚ್ಚು ಜನರಿದ್ದ ಕಾರಣ, ಧ್ವನಿಯೇರಿಸಿ ಬೈದಾಗ, ತಪ್ಪಿಸಿಕೊಂಡು ಬೇರೆ ಬೋಗಿಗೆ ಓಡಿ ಹೋಗಿದ್ದಾನೆ. ಪತ್ನಿ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದರಿಂದ, ನಾವು ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಿದೆವು. ದಾವಣಗೆರೆ ರೈಲ್ವೇ ಸ್ಟೇಷನ್‌ನಲ್ಲಿ ಆರೋಪಿಯನ್ನು ಹಿಡಿಯಲಾಯಿತು. ರೈಲ್ವೇ ಪೊಲೀಸರು ನಮಗೆ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಹೋಗಲು ತಿಳಿಸಿದರು. ಹೆಚ್ಚು ಗಾಯವಾಗಿದ್ದರಿಂದ ಖಾಸಗಿ ಆಸ್ಪತ್ರೆಗೆ ಹೋಗಲು ಸಲಹೆ ನೀಡಿದರು. ಈಗ ಆಪರೇಷನ್ ಮಾಡಲಾಗಿದ್ದು, ಬಡವರಾದ ನಮಗೆ ಕೈಯಲ್ಲಿ ಹಣವಿಲ್ಲದೆ ದಿಕ್ಕು ಕಾಣದಂತಾಗಿದೆ ಎಂದು ಗಾಯಾಳು ಲಕ್ಷ್ಮಿ ಅವರ ಪತಿ ಮಹಾಂತೇಶ ವೀರಭದ್ರಪ್ಪ ಸೊರಟೂರ ತಮ್ಮ ಅಳಲು ತೋಡಿಕೊಂಡರು.


Spread the love

LEAVE A REPLY

Please enter your comment!
Please enter your name here