ವಿಜಯಸಾಕ್ಷಿ ಸುದ್ದಿ, ಗದಗ : ಅಪೂರ್ಣಗೊಂಡಿರುವ ಗದುಗಿನ ಕುಡುಒಕ್ಕಲಿಗರ ಭವನ ನಿರ್ಮಾಣಕ್ಕೆ ಸರಕಾರದ ಅನುದಾನವನ್ನು ಒದಗಿಸುವದಾಗಿ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅವರು ರವಿವಾರ ಬಿಂಕದಕಟ್ಟಿ ಪ್ರಾಣಿಸಂಗ್ರಹಾಲಯದ ಹತ್ತಿರವಿರುವ ಕುಡುಒಕ್ಕಲಿಗರ ಭವನದಲ್ಲಿ ಅಖಿಲ ಕರ್ನಾಟಕ ಲಿಂಗಾಯತ ಕುಡುಒಕ್ಕಲಿಗರ ಸಂಘ ಕೇಂದ್ರ ಕಚೇರಿ ಗದಗ ಇದರ ವಾರ್ಷಿಕ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ, ಮಾಜಿ ಸೈನಿಕರ ಮತ್ತು ವಿಶೇಷ ಸಾಧಕರ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಕುಡುಒಕ್ಕಲಿಗ ಸಮಾಜಬಾಂಧವರು ದಾನಧರ್ಮಕ್ಕೆ ಹೆಸರಾದವರು. ಆದಾಗ್ಯೂ ಸಮುದಾಯ ಭವನ ಅಪೂರ್ಣಗೊಂಡಿದ್ದು, ಈ ಬಗ್ಗೆ ಸಮಾಜಬಾಂಧವರು ಸಂಘಟಿತರಾಗಿ ಅನುದಾನಕ್ಕೆ ಮುಂದಾದರೆ ಕ್ರಮ ಜರುಗಿಸುವದಾಗಿ ಹೇಳಿ, ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಅವರನ್ನು ಪ್ರೋತ್ಸಾಹಿಸಿ ಉನ್ನತ ಶಿಕ್ಷಣಕ್ಕೆ ಅಣಿಗೊಳಿಸುವ ಪ್ರಯತ್ನ ಶ್ಲಾಘನೀಯ ಎಂದರು.
ರೈತ ಪರ ಹೋರಾಟಗಾರ, ಪ್ರಗತಿಪರ ರೈತ ಪರಮೇಶ್ವರಪ್ಪ ಜಂತ್ಲಿ ಅವರಿಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯವು ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಅವರ ಕೃಷಿ ಸಾಧನೆಗೆ ಉತ್ತೇಜನ ನೀಡಿದ್ದು ಅಭಿನಂದನೀಯ.
ಅವರ ಕೃಷಿ ಸಾಧನೆ ಹೀಗೆಯೇ ಮುನ್ನಡೆಯಲಿ. ಯುವ ಕೃಷಿಕರಿಗೆ ಮಾರ್ಗದರ್ಶನ ಪರಮೇಶ್ವರಪ್ಪ ಅವರಿಂದ ದೊರೆಯಲಿ ಎಂದರು.
ಮುಖ್ಯ ಅತಿಥಿ, ಅಖಿಲ ಕರ್ನಾಟಕ ಲಿಂಗಾಯತ ಕುಡುಒಕ್ಕಲಿಗರ ಮಹಾಸಭಾದ ಅಧ್ಯಕ್ಷ ಬಿ.ಬಿ. ಪಾಟೀಲ ಮಾತನಾಡಿ, ಸಿರಸಂಗಿ ಲಿಂಗರಾಜರು ದಾನಗುಣಕ್ಕೆ ಹೆಸರಾದವರು. ಶಿಕ್ಷಣಕ್ಕೆ ಅವರು ಸಲ್ಲಿಸಿದ ಅನುಪಮ ಸೇವೆ ಸದಾಕಾಲ ಸ್ಮರಣೀಯವಾದದ್ದು ಎಂದರಲ್ಲದೆ, ಇಂದಿಗೂ ಬೆಳಗಾವಿಯ ನವಲಗುಂದ ಶಿರಸಂಗಿ ಟ್ರಸ್ಟ್ ಸಮಾಜದ ಪ್ರತಿಭಾನ್ವಿತ ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡುತ್ತಿರುವದು ಸ್ವಾಗತಾರ್ಹ. ಸಮಾಜಬಾಂಧವರು ಟ್ರಸ್ಟ್ನ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಸನ್ಮಾನಿತರಾದ ಕೃಷಿ ಸಾಧಕ ಪರಮೇಶ್ವರಪ್ಪ ಜಂತ್ಲಿ ಮಾತನಾಡಿ, ನಾವೆಷ್ಟೇ ಶಿಕ್ಷಣ ಪಡೆದು ಉನ್ನತ ಹುದ್ದೆಯಲ್ಲಿದ್ದರೂ, ಶ್ರೀಮಂತಿಕೆ ಇದ್ದರೂ ಸಹ ಕೃಷಿಯ ಮುಂದೆ ಅದೆಲ್ಲ ಗೌಣ. ಭೂಮಿ ತಾಯಿಯನ್ನು ನಂಬಿದರೆ ಕೈಬಿಡುವುದಿಲ್ಲ. ಮೈಮುರಿದು ಕಷ್ಟಪಟ್ಟು ದುಡಿದರೆ ಫಲ ನಿಶ್ಚಿತ. ಸಣ್ಣ ಭೂಮಿಯಲ್ಲಿ ಕೃಷಿ ಮಾಡಿಕೊಂಡಿದ್ದ ನನಗೆ ಹಲವರು ಪ್ರೋತ್ಸಾಹ ನೀಡಿ ಸ್ಪೂರ್ತಿ ತುಂಬಿದರು. ಮಾರ್ಗದರ್ಶನ ಮಾಡಿದರು.
ಅದರಿಂದಾಗಿ ನಾನು ಇಂದು ಕೃಷಿಯಲ್ಲಿ ಸಾಧನೆ ಮಾಡಲು ಅವಕಾಶವಾಯಿತು. ಹಾಗೆಯೇ ಇಂದಿನ ಯುವ ಜನಾಂಗ ಕಾಲೇಜು ಕಲಿತು ಖಾಲಿ ಕುಳಿತು ಸರ್ಕಾರಿ ನೌಕರಿಗಾಗಿ ಕಾಯದೇ ಕೃಷಿಯಲ್ಲಿ ಸಾಧನೆ ಮಾಡಿ ನಂಬಿದ ಭೂಮಿತಾಯಿ ಅನ್ನ ಕೊಡುವಳು ಎಂದರು.
ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದುಕೊಂಡ ಸಮಾಜ 43 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವೇದಿಕೆಯ ಮೇಲೆ ಹಿರಿಯರಾದ ನಿಂಗಪ್ಪ ಹಳ್ಳದ, ಹಾಲೇಶ ಉಪನಾಳ, ವಸಂತಪ್ಪ ಕನಾಜ, ಸಿ.ಬಿ. ಹೊನ್ನಪ್ಪನವರ, ಗದಗ-ಬೆಟಗೇರಿ ನಗರಸಭೆಯ ಸದಸ್ಯ ಚಂದ್ರು ಕರಿಸೋಮನಗೌಡ್ರ ಉಪಸ್ಥಿತರಿದ್ದರು.
ಸಂಘದ ಕಾರ್ಯದರ್ಶಿ ಶರಣಪ್ಪ ದಿಡ್ಡಿಮನಿ ಸ್ವಾಗತಿಸಿದರು. ನಡುವಿನಮನಿ ಗುರುಗಳು ನಿರೂಪಿಸಿದರು. ಕೊನೆಗೆ ಸಿದ್ರಾಮಪ್ಪ ಗೋಜನೂರ ವಂದಿಸಿದರು. ಸಮಾರಂಭದಲ್ಲಿ ಗುಡೂರ ವಕೀಲರು, ವಸಂತಪ್ಪ ಗೋಜನೂರ, ಕರಿಚಣ್ಣವರ ಸೇರಿದಂತೆ ಸಮಾಜದ ಗಣ್ಯರು, ಹಿರಿಯರು ಪಾಲ್ಗೊಂಡಿದ್ದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ, ಸರ್ವರ ಸಹಕಾರದೊಂದಿಗೆ ಸಂಘವನ್ನು ಪ್ರಗತಿಯಲ್ಲಿ ಮುನ್ನಡೆಸಿಕೊಂಡು ಬರಲಾಗಿದೆ. ಕುಡುಒಕ್ಕಲಿಗರ ಭವನ ನಿರ್ಮಾಣಕ್ಕೆ ಸಮಾಜಬಾಂಧವರು ಉದಾರ ಗುಣದಿಂದ ಮುಂದೆ ಬಂದರೆ ಶೀಘ್ರದಲ್ಲಿ ಬಾಕಿ ಕಾಮಗಾರಿಯನ್ನು ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುವದು ಎಂದು ಹೇಳಿ ಸಂಘದ ಪ್ರಗತಿಯ ವರದಿಯನ್ನು ಸಾದರಪಡಿಸಿದರು.
Advertisement