ವಿಜಯಸಾಕ್ಷಿ ಸುದ್ದಿ, ರೋಣ : ಹಿಂಗಾರು ಹಂಗಾಮಿನ ಬೆಳೆಗಳ ಬಿತ್ತನೆಗೆ ವರ್ಷಧಾರೆ ಸುರಿಸಿದ ವರುಣ ಹಲವಾರು ಅವಾಂತರಗಳನ್ನು ಸೃಷ್ಟಿಸಿದರೂ ಸಹ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದ್ದಾನೆ.
ಕಳೆದ ಕೆಲ ದಿನಗಳಿಂದ ಮರೆಯಾಗಿದ್ದ ಮಳೆ ರವಿವಾರ ಸಂಜೆ ರಭಸದಿಂದ ಸುರಿಯುವ ಮೂಲಕ ಜಮೀನುಗಳಲ್ಲಿನ ಕೃಷಿ ಹೊಂಡಗಳನ್ನು ಭರ್ತಿಗೊಳಿಸಿತು. ಮುಂಗಾರು ಮಳೆಗೂ ತುಂಬಿ ಹರಿಯದ ಹಳ್ಳ-ಕೊಳ್ಳಗಳು ಒಂದೇ ಮಳೆಗೆ ಭರ್ತಿಯಾಗಿ ಹರಿಯತೊಡಗಿವೆ.
ರವಿವಾರ ಸಂಜೆ 6 ಗಂಟೆ ಸುಮಾರಿಗೆ ಆರಂಭಗೊಂಡ ಭಾರೀ ಮಳೆ ರಾತ್ರಿ 9 ಗಂಟೆಯವರೆಗೂ ಸುರಿಯಿತು. ಇದರಿಂದ ರೋಣ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಅನೇಕ ಸಮಸ್ಯೆಗಳು ಸೃಷ್ಟಿಯಾದವು.
ರೋಣ, ಜಕ್ಕಲಿ, ಮಾರನಬಸರಿ ಗ್ರಾಮಗಳಲ್ಲಿ ಭಾರೀ ಮಳೆ ಸುರಿದಿದ್ದರಿಂದ ಹಲವು ಅವಾಂತರಗಳೂ ಸೃಷ್ಟಿಯಾದವು. ಮುಖ್ಯವಾಗಿ ತಾಲೂಕಿನ ಯಾವಗಲ್ಲ ಗ್ರಾಮದ ಬೆಣ್ಣೆಹಳ್ಳ ಭರ್ತಿಯಾಗಿದ್ದರಿಂದ ಜಮೀನುಗಳಿಗೆ ನೀರು ನುಗ್ಗಿ ರೈತರು ಹಾನಿ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಸೇತುವೆ ಮೆಲೆ ನೀರು ನುಗ್ಗಿದ್ದು, ರಸ್ತೆ ಸಂಚಾರ ಕೂಡ ಕೆಲ ಗಂಟೆಗಳವರೆಗೆ ಸ್ಥಗಿತಗೊಂಡಿತ್ತು.