ಮೈಸೂರು/ಬೆಂಗಳೂರು: ಮುಡಾ ಸೈಟ್ ಹಂಚಿಕೆ ಅಕ್ರಮ ಪ್ರಕರಣ ದಿನದಿಂದ ದಿನಕ್ಕೆ ಗಂಭೀರ ತಿರುವು ಪಡೆದುಕೊಳ್ಳುತ್ತಿದೆ. ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ED) ಮತ್ತೊಂದು ದೊಡ್ಡ ಕ್ರಮ ಕೈಗೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಎಸ್.ಕೆ. ಮರೀಗೌಡ ಅವರಿಗೆ ಸೇರಿದ 20.85 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.
ಇಡಿ ತನಿಖೆಯ ಪ್ರಕಾರ, ಮುಡಾ ಅಧ್ಯಕ್ಷರಾಗಿದ್ದ ಕಾಲದಲ್ಲಿ ಮರೀಗೌಡ ಅವರು ಆಗಿನ ಮುಡಾ ಆಯುಕ್ತ ಜಿ.ಟಿ. ದಿನೇಶ್‌ಕುಮಾರ್ ಸಹಾಯದಿಂದ ಅಕ್ರಮ ಮಾರ್ಗದಲ್ಲಿ ನಿವೇಶನಗಳನ್ನು ಪಡೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಮರೀಗೌಡ ಹೆಸರಲ್ಲಿ ಇದ್ದ 6 ನಿವೇಶನಗಳು ಹಾಗೂ 3 ವಸತಿ ಸಂಕೀರ್ಣ ಕಟ್ಟಡಗಳನ್ನು ಇಡಿ ಜಪ್ತಿ ಮಾಡಿದೆ.
ತನಿಖೆಯಲ್ಲಿ ವಕ್ರತುಂಡ ಲೇಔಟ್ ಅಭಿವೃದ್ಧಿಯಲ್ಲಿ ಭಾರೀ ಅವ್ಯವಹಾರ ನಡೆದಿರುವುದು ಸಾಬೀತಾಗಿದೆ. ವಕ್ರತುಂಡ ಸೊಸೈಟಿ ಮರೀಗೌಡ ಅವರ ಪತ್ನಿ ಜಯಶ್ರೀ ಹೆಸರಿನಲ್ಲಿ ಇದ್ದರೂ, ಅದರ ನಿಯಂತ್ರಣ ಜಯರಾಂ ಎಂಬ ವ್ಯಕ್ತಿಯ ಕೈಯಲ್ಲಿತ್ತು ಎಂದು ವರದಿಯಾಗಿದೆ. ಇದೇ ವೇಳೆ ಜಯರಾಂ ಅವರು ಸಂಬಂಧಿಕರ ಹೆಸರಲ್ಲಿ 53 ಲಕ್ಷ ರೂ. ಹಣ ವರ್ಗಾವಣೆ ನಡೆಸಿರುವುದೂ ಪತ್ತೆಯಾಗಿದೆ.
ಮರೀಗೌಡ ಅವರು ಸೊಸೈಟಿಯಿಂದ 50 ಲಕ್ಷ ರೂ. ಸಾಲ ಪಡೆದಿರುವಂತೆ ಲೆಕ್ಕ ತೋರಿಸಿ, ಮುಡಾದಲ್ಲಿ ಅಕ್ರಮ ನಡೆಸಲು ಈ ವ್ಯವಸ್ಥೆ ರೂಪಿಸಲಾಗಿದೆ ಎಂಬ ಗಂಭೀರ ಅಂಶಗಳನ್ನು ಇಡಿ ತನ್ನ ತನಿಖಾ ವರದಿಯಲ್ಲಿ ಉಲ್ಲೇಖಿಸಿದೆ.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ಇದುವರೆಗೆ ಒಟ್ಟು 460 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ. ಈ ಹಿಂದೆ ಜಿ.ಟಿ. ದಿನೇಶ್‌ಕುಮಾರ್ ಸೇರಿದಂತೆ ಹಲವು ಆರೋಪಿಗಳಿಂದ ಅಕ್ರಮವಾಗಿ ಸಂಪಾದನೆ ಮಾಡಿದ 283 ನಿವೇಶನಗಳನ್ನು ವಶಕ್ಕೆ ಪಡೆದುಕೊಂಡಿತ್ತು.
ಇನ್ನೊಂದೆಡೆ, ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಬಿ.ಎಂ. ಪಾರ್ವತಿ ಸೇರಿದಂತೆ ಐವರಿಗೆ ನೀಡಲಾಗಿದ್ದ ‘ಬಿ’ ರಿಪೋರ್ಟ್ ವಿರುದ್ಧ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜನವರಿ 28ಕ್ಕೆ ಮುಂದೂಡಿದೆ.



