ಮಡಿಕೇರಿ: ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲ ಹೋಬಳಿಯಲ್ಲಿ ಕಾಡಾನೆ ದಾಳಿಗೆ ಕಾಫಿ ಬೆಳೆಗಾರೊಬ್ಬರು ಬಲಿಯಾದ ದುರ್ಘಟನೆ ನಡೆದಿದೆ.
ಸಾವನ್ನಪ್ಪಿದವರನ್ನು ಕಾಯಿಮಾನಿ ನಿವಾಸಿ ರತ್ತು ಎಂದು ಗುರುತಿಸಲಾಗಿದೆ. ಇಂದು ಬೆಳಿಗ್ಗೆ ತಮ್ಮ ಕಾಫಿ ತೋಟಕ್ಕೆ ತೆರಳುತ್ತಿದ್ದ ವೇಳೆ ಏಕಾಏಕಿ ಎದುರಾದ ಕಾಡಾನೆ ಅವರ ಮೇಲೆ ದಾಳಿ ನಡೆಸಿ ತುಳಿದು ಕೊಂದಿದೆ.
ಘಟನೆಯ ಬಳಿಕ ರತ್ತು ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕುಟ್ಟ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಕಳೆದ ಕೆಲವು ದಿನಗಳಿಂದ ಶ್ರೀಮಂಗಲದ ಕುರ್ಚಿ ಹಾಗೂ ಕಾಯಿಮಾನಿ ಭಾಗದಲ್ಲಿ 8ರಿಂದ 10 ಕಾಡಾನೆಗಳ ಹಿಂಡು ತಂಗಿದೆ ಎಂದು ತಿಳಿದುಬಂದಿದೆ. ಹಗಲು ಹೊತ್ತಿನಲ್ಲೇ ಆನೆಗಳು ಗ್ರಾಮ ಪ್ರದೇಶಗಳಲ್ಲಿ ಸಂಚರಿಸುತ್ತಿರುವುದರಿಂದ ಸ್ಥಳೀಯರಲ್ಲಿ ಭೀತಿ ಹೆಚ್ಚಾಗಿದೆ.
ತೋಟಗಳಿಗೆ ತೆರಳಲು ಕಾರ್ಮಿಕರು ಹಾಗೂ ಬೆಳೆಗಾರರು ಹೆದರುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಂಡು ಕಾಡಾನೆಗಳನ್ನು ಕಾಡಿಗೆ ಓಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.



