ಅನುಭವ ಮಂಟಪ ಪ್ರಜಾಪ್ರಭುತ್ವದ ಬುನಾದಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: 12ನೇ ಶತಮಾನದಲ್ಲಿಯೇ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪ ವಿಶ್ವದ ಮೊದಲ ಸಂಸತ್ತಿನ ಪರಿಕಲ್ಪನೆ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದು, ಸಂಸದೀಯ ಪ್ರಜಾಪ್ರಭುತ್ವದ ಬುನಾದಿಯಾಗಿದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟರು.

Advertisement

ಅವರು ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ 2753ನೇ ಶಿವಾನುಭವ ಕಾರ್ಯಕ್ರಮದಲ್ಲಿ ಆಯೋಜಿಸಿದ್ದ ಬಸವರಾಜ ಹೊರಟ್ಟಿಯವರ ಜೀವಮಾನದ ಸಾಧನೆ, ಸನ್ಮಾನ ಜೊತೆಗೆ ಅವರ ನಡೆದು ಬಂದ ದಾರಿಯ ಅವಲೋಕನ, ವಚನ ಸಾಹಿತ್ಯ ಪಿತಾಮಹ ಫ.ಗು. ಹಳಕಟ್ಟಿ ಹಾಗೂ ಪೂಜ್ಯಶ್ರೀ ಲಿಂಗಾನಂದ ಮಹಾಸ್ವಾಮಿಗಳ ಕುರಿತು ಏರ್ಪಡಿಸಿದ ವಿಶೇಷ ಶಿವಾನುಭವದಲ್ಲಿ ಸನ್ಮಾನ ಸ್ವೀಕರಿಸಿ, ತೋಂಟದಾರ್ಯ ಮಠಕ್ಕೆ ವಿಧಾನ ಪರಿಷತ್ತಿನ ಅನುಭವ ಮಂಟಪದ ಅಪರೂಪದ ಫೋಟೋವನ್ನು ನೀಡಿ ಮಾತನಾಡಿದರು.

12ನೇ ಶತಮಾನದಲ್ಲಿಯೇ ಸಮಾನತೆಗಾಗಿ ಬಸವಣ್ಣನವರು ಅನುಭವ ಮಂಟಪ ಸ್ಥಾಪಿಸಿ ಅಲ್ಲಿ ಎಲ್ಲ ಸಮುದಾಯದ ಪ್ರತಿನಿಧಿಗಳನ್ನು ದಾರ್ಶನಿಕರನ್ನು, ಕವಿಗಳನ್ನು, ವಿದ್ವಾಂಸರನ್ನು, ಸಂತರನ್ನು ಸೇರಿಸಿಕೊಂಡು ಸಮ ಸಮಾಜ ಕಟ್ಟುವುದಕ್ಕಾಗಿ ಚಿಂತನೆ ಆರಂಭಿಸಿದ ಅದ್ಭುತ ವೇದಿಕೆಯಾಗಿತ್ತು ಎಂದರು.

ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಅನುಭವ ಮಂಟಪ ಫೋಟೋವನ್ನು ಸ್ವೀಕರಿಸಿ ಮಾತನಾಡಿ, 12ನೇ ಶತಮಾನದಲ್ಲಿಯೇ ಬಸವಣ್ಣನವರು ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಆಶಯ ಹೊತ್ತು ತಮ್ಮ ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಅಂದೇ ನೀಡಿದ್ದರು. ಬಸವಣ್ಣನವರ ಆದರ್ಶಗಳನ್ನೇ ಮೈಗೂಡಿಸಿಕೊಂಡ ಸಭಾಪತಿ ಬಸವರಾಜ ಹೊರಟ್ಟಿಯವರ ತಮ್ಮ ಅರ್ಧ ಶತಮಾನದ ಸಾರ್ವಜನಿಕ ಬದುಕಿನಲ್ಲಿ ಒಂದೂ ಕಪ್ಪು ಚುಕ್ಕೆಯನ್ನು ಅಂಟಿಸಿಕೊಳ್ಳದೇ ಇದ್ದಿರುವುದು ಬಸವಣ್ಣನವರ ವಿಚಾರಗಳನ್ನು ಅಳವಡಿಸಿಕೊಂಡಿದ್ದಕ್ಕೆ ಸಾಧ್ಯವಾಗಿದೆ. ಅಪರೂಪದ ಅನುಭವ ಮಂಟಪದ ಫೋಟೋಗಳನ್ನು ನಾಡಿನ ತುಂಬೆಲ್ಲ ನೀಡುವ ಮೂಲಕ ಬಸವಣ್ಣನವರ ವಿಚಾರಗಳನ್ನು ಸಂಸತ್ತಿನ ಮಹತ್ವವನ್ನು ಸಾರುತ್ತಿರುವ ಹೊರಟ್ಟಿಯವರ ಕಾರ್ಯ ಅಭಿನಂದನಾರ್ಹ ಎಂದರು.

ಈ ಸಂದರ್ಭದಲ್ಲಿ ಡಾ. ಬಸವರಾಜ ಧಾರವಾಡ, ಪ್ರಾ. ಶಿವಾನಂದ ಪಟ್ಟಣಶೆಟ್ಟಿ, ಪ್ರಾ. ರಮೇಶ ಕಲ್ಲನಗೌಡ್ರ, ಕನಕದಾಸ ಶಿಕ್ಷಣ ಸಮಿತಿಯ ಅಧ್ಯಕ್ಷ ರವಿ ದಂಡಿನ, ಉದ್ದಿಮೆದಾರ ಅಶೋಕ ಜೈನ, ಎಸ್.ಎಂ. ಅಗಡಿ, ಕೊಟ್ರೇಶ ಅಂಗಡಿ, ಎಸ್.ಎಸ್. ಗಡ್ಡದ, ಹೆಚ್.ಡಿ. ಪೂಜಾರ, ರವಿ ಕೊಣ್ಣೂರು, ಎಂ.ಎಚ್. ಪೂಜಾರ, ಎಸ್.ಜಿ. ಕೋಲ್ಮಿ, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡರ, ಉಪಾಧ್ಯಕ್ಷ ಉಮೇಶ ಪುರದ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಕೋಶಾಧ್ಯಕ್ಷ ಬಸವರಾಜ ಸಿ. ಕಾಡಪ್ಪನವರ, ಸಹ ಕಾರ್ಯದರ್ಶಿ ಸೋಮಶೇಖರ ಪುರಾಣಿಕ, ಸಂಘಟನಾ ಕಾರ್ಯದರ್ಶಿಗಳಾದ ಮಹೇಶ ಗಾಣಿಗೇರ, ನಾಗರಾಜ ಹಿರೇಮಠ, ಶಿವಾನುಭವ ಸಮಿತಿ ಚೇರಮನ್ ಆಯ್.ಬಿ. ಬೆನಕೊಪ್ಪ, ಶಿವಾನಂದ ಫ.ಹೊಂಬಳ ಮುಂತಾದವರು ಉಪಸ್ಥಿತರಿದ್ದರು. ವಿದ್ಯಾ ಪ್ರಭು ಗಂಜಿಹಾಳ ನಿರೂಪಿಸಿದರು.

ಇಂದು ಇಡೀ ಜಗತ್ತಿನಾದ್ಯಂತ ಪ್ರಜಾಪ್ರಭುತ್ವ ಜೀವಂತವಾಗಿದ್ದರೆ ಅದಕ್ಕೆ ಅಂದಿನ ಬಸವಣ್ಣನವರ ಅನುಭವ ಮಂಟಪ ಕಾರಣ. ಇಂತಹ ಅಪರೂಪದ ಫೋಟೋವನ್ನು ಕರ್ನಾಟಕ ವಿಧಾನ ಪರಿಷತ್ತಿನ ಮೂಲಕ ಮುದ್ರಣ ಮಾಡಿ ಎಲ್ಲ ಜನಪ್ರತಿನಿಧಿಗಳಿಗೆ, ವಿದ್ವಾಂಸರಿಗೆ, ಚಿಂತಕರಿಗೆ, ಸಾಹಿತಿಗಳಿಗೆ ತಲುಪಿಸುತ್ತಿದ್ದೇವೆ. ಅದರ ಭಾಗವಾಗಿ ಇಂದು ತೋಂಟದಾರ್ಯ ಮಠಕ್ಕೆ ಅರ್ಪಿಸಿದ್ದು ನನಗೆ ಖುಷಿ ತಂದಿದೆ ಎಂದು ಬಸವರಾಜ ಹೊರಟ್ಟಿ ಹೇಳಿದರು.


Spread the love

LEAVE A REPLY

Please enter your comment!
Please enter your name here