ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ವಾರ್ಡ್ ನಂ 17, 1A ವ್ಯಾಪ್ತಿಯಲ್ಲಿ ಪ್ರಾರಂಭಗೊಳ್ಳುತ್ತಿರುವ ಬಾರ್ & ರೆಸ್ಟೋರೆಂಟ್ನ್ನು ಸ್ಥಳಾಂತರಿಸಬೇಕು ಎಂದು ಶನಿವಾರ ಇಲ್ಲಿನ ನಿವಾಸಿಗಳು ಜಿಲ್ಲಾ ಅಬಕಾರಿ ಅಧಿಕಾರಿಗಳು ಮತ್ತು ಲೋಕಾಯುಕ್ತರಿಗೆ ಮನವಿ ಸಲ್ಲಿಸಿದರು.
ಮನವಿ ಪತ್ರದಲ್ಲಿ, ಬಾರ್ ಹತ್ತಿರವೇ ನೂರಾರು ಬಡ ಕುಟುಂಬಗಳು, ಎಪಿಎಂಸಿ ಮಾರುಕಟ್ಟೆಯ ಹಮಾಲರ ಮತ್ತು ಕುರಿ/ಉಣ್ಣೆ ಔದ್ಯೋಗಿಕ ಸಹಕಾರಿ ಸಂಘದ ವಸತಿ ಮನೆಗಳು, ಈಶ್ವರ ದೇವಸ್ಥಾನ, ಆಕ್ಸ್ಫರ್ಡ್ ಶಾಲೆ, ಡಿ.ದೇವರಾಜ್ ಅರಸು ಬಾಲಕ ಮತ್ತು ಬಾಲಕಿಯರ ವಸತಿ ನಿಲಯ, ಆಸ್ಪತ್ರೆ ಸಮೀಪವೇ ಬಿ.ಸಿ.ಎನ್ ಕಾಲೇಜು ಇದೆ. ಇಲ್ಲಿ ಬಾರ್ ಪ್ರಾರಂಭವಾದರೆ ಜನರ ನಿತ್ಯದ ಬದುಕಿಗೆ ತೊಂದರೆಯಾಗುತ್ತದೆ ಮತ್ತು ಇಡೀ ವಾತಾವರಣ, ಕುಟುಂಬಗಳು ಹಾಳಾಗುತ್ತವೆ. ಯುವಕರು ಮದ್ಯವ್ಯಸನಿಗಳಾಗುತ್ತಾರೆ. ಇಲ್ಲಿ ಬಾರ್ ಬೇಡ ಎಂದು ಕಳೆದ ಒಂದೂವರೆ ವರ್ಷದಿಂದ ಹೋರಾಟ ಮಾಡುತ್ತಲೇ ಬರಲಾಗಿದೆ.
ಈ ಸ್ಥಳದಲ್ಲಿ ಬಾರ್ ಪ್ರಾರಂಭಿಸಲು ಅನುಮತಿ ನೀಡದೇ ಬಾರ್ ಸ್ಥಳಾಂತರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. ಈ ವೇಳೆ ನಿವಾಸಿಗಳಾದ ಮಂಜುನಾಥ ಮುಳಗುಂದ, ಮಾಂತೇಶ ಗುಡ್ನ್ಯಾಳ, ಭರಮಣ್ಣ ಶರಸೂರಿ, ಲೆಂಕೆಪ್ಪ ಶರಸೂರಿ, ಮಾಂತಪ್ಪ ಗದ್ದಿ, ಮಂಜುನಾಥ ಹವಳಣ್ಣವರ, ಮಾಂತೇಶ ಗದ್ದಿ, ನೀಲಪ್ಪ ಹುರಕನವರ ಸೇರಿ ಹಲವರಿದ್ದರು.



