ದೇಶದ ಹಲವು ರಾಜ್ಯಗಳಲ್ಲಿ ಕಳೆದ ಕೆಲವು ದಿನಗಳಿಂದ ಹವಾಮಾನದಲ್ಲಿ ನಿರಂತರ ಬದಲಾವಣೆ ಕಂಡುಬರುತ್ತಿದ್ದು, ಜನರ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತಿದೆ.
ಕೆಲವೆಡೆ ತೀವ್ರ ಬಿಸಿಲು, ಮತ್ತೆ ಕೆಲವೆಡೆ ಮಳೆ ಹಾಗೂ ತಣ್ಣನೆಯ ಗಾಳಿ ಬೀಸುತ್ತಿರುವುದರಿಂದ ಶೀತ, ಕೆಮ್ಮು ಮತ್ತು ಜ್ವರದಂತಹ ಸೋಂಕುಗಳು ಹೆಚ್ಚಾಗುವ ಆತಂಕ ವ್ಯಕ್ತವಾಗಿದೆ.
ಆರೋಗ್ಯ ತಜ್ಞರ ಪ್ರಕಾರ, ಹವಾಮಾನ ಪದೇಪದೇ ಬದಲಾಗುವಾಗ ದೇಹವು ಹೊಸ ಪರಿಸ್ಥಿತಿಗೆ ಹೊಂದಿಕೊಳ್ಳಲು ಹೆಚ್ಚು ಶ್ರಮಪಡಬೇಕಾಗುತ್ತದೆ. ಇದರಿಂದ ರೋಗನಿರೋಧಕ ಶಕ್ತಿ ಕುಂದುದು ಸಾಧ್ಯತೆ ಹೆಚ್ಚುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಸಾಕಷ್ಟು ನಿದ್ರೆ ಇಲ್ಲದಿರುವುದು, ಕಡಿಮೆ ನೀರು ಕುಡಿಯುವುದು ಹಾಗೂ ಪೌಷ್ಟಿಕ ಆಹಾರ ಸೇವನೆಯ ಕೊರತೆ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಬಹುದು ಎಂದು ವೈದ್ಯರು ತಿಳಿಸಿದ್ದಾರೆ.
ಇಮ್ಯುನಿಟಿ ಕಡಿಮೆಯಾದಾಗ ಪದೇಪದೇ ಶೀತ, ಕೆಮ್ಮು, ಗಂಟಲು ನೋವು, ದೇಹದ ನೋವು ಮತ್ತು ಸುಸ್ತು ಕಾಣಿಸಿಕೊಳ್ಳಬಹುದು ಎಂದು ತಜ್ಞರು ಹೇಳಿದ್ದಾರೆ. ಜೊತೆಗೆ ಗಾಯಗಳು ನಿಧಾನವಾಗಿ ಗುಣಮುಖವಾಗುವುದು ಹಾಗೂ ಜೀರ್ಣಕ್ರಿಯೆ ಸಂಬಂಧಿತ ಸಮಸ್ಯೆಗಳೂ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?
ಹವಾಮಾನ ಬದಲಾವಣೆ ನಡುವೆ ಆರೋಗ್ಯ ಕಾಪಾಡಿಕೊಳ್ಳಲು ಸಮತೋಲನ ಆಹಾರ ಅತ್ಯಂತ ಮುಖ್ಯವಾಗಿದೆ. ತಾಜಾ ಹಣ್ಣುಗಳು, ತರಕಾರಿಗಳು ಮತ್ತು ವಿಟಮಿನ್ ಸಮೃದ್ಧ ಆಹಾರ ಸೇವನೆ ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ ಎಂದು ತಜ್ಞರು ಸಲಹೆ ನೀಡಿದ್ದಾರೆ.
ದಿನಪೂರ್ತಿ ಸಾಕಷ್ಟು ನೀರು ಕುಡಿಯುವುದು, ಸರಿಯಾದ ನಿದ್ರೆ ಪಡೆಯುವುದು ಮತ್ತು ನಿಯಮಿತ ವ್ಯಾಯಾಮ ಮಾಡುವುದು ಅಗತ್ಯವಾಗಿದೆ. ಜೊತೆಗೆ ಸ್ವಚ್ಛತೆ ಕಾಪಾಡುವುದು ಹಾಗೂ ಹವಾಮಾನಕ್ಕೆ ತಕ್ಕ ಬಟ್ಟೆ ಧರಿಸುವುದೂ ಮುಖ್ಯ ಎಂದು ಅವರು ತಿಳಿಸಿದ್ದಾರೆ.
ಜಂಕ್ ಫುಡ್ ಸೇವನೆ ಮತ್ತು ಅಸಮತೋಲಿತ ಜೀವನಶೈಲಿಯನ್ನು ತಪ್ಪಿಸುವಂತೆ ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ. ಪದೇಪದೇ ಅನಾರೋಗ್ಯ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ ಎಂದು ಅವರು ತಿಳಿಸಿದ್ದಾರೆ.



