ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಮಾನಸಿಕ ಒತ್ತಡ, ಆತಂಕ ಮತ್ತು ಖಿನ್ನತೆಯಂತಹ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ. ಅತಿಯಾದ ಕೆಲಸದ ಒತ್ತಡ, ಸ್ಪರ್ಧಾತ್ಮಕ ಜೀವನಶೈಲಿ ಮತ್ತು ನಿದ್ರೆಯ ಕೊರತೆ ಇದಕ್ಕೆ ಪ್ರಮುಖ ಕಾರಣಗಳಾಗಿವೆ. ಇಂತಹ ಸಂದರ್ಭದಲ್ಲಿ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಧ್ಯಾನ ಮಹತ್ವದ ಪಾತ್ರವಹಿಸುತ್ತದೆ.
ಬೆಳಿಗ್ಗೆ ಧ್ಯಾನ ಮಾಡುವುದನ್ನು ತಜ್ಞರು ಶಿಫಾರಸು ಮಾಡುತ್ತಿದ್ದರೂ, ಸಮಯದ ಅಭಾವದಿಂದ ಅನೇಕರಿಗೆ ಅದು ಸಾಧ್ಯವಾಗುವುದಿಲ್ಲ. ಅಂತಹವರು ರಾತ್ರಿ ಮಲಗುವ ಮುನ್ನ ಧ್ಯಾನ ಮಾಡುವುದರಿಂದಲೂ ಸಾಕಷ್ಟು ಪ್ರಯೋಜನ ಪಡೆಯಬಹುದು. ದಿನವಿಡೀ ಸಂಗ್ರಹವಾದ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು ರಾತ್ರಿ ಧ್ಯಾನ ಸಹಕಾರಿ.
ಉತ್ತಮ ನಿದ್ರೆ
ಇಂದಿನ ಕಾಲದಲ್ಲಿ ಅನೇಕರು ಮಲಗುವ ಮುನ್ನ ಮೊಬೈಲ್ ಬಳಕೆಯಲ್ಲಿ ಸಮಯ ಕಳೆಯುತ್ತಾರೆ. ಇದರಿಂದ ನಿದ್ರೆಯ ಗುಣಮಟ್ಟ ಕುಸಿಯುತ್ತದೆ. ಮಲಗುವ ಮೊದಲು 10–15 ನಿಮಿಷ ಧ್ಯಾನ ಮಾಡುವುದರಿಂದ ಮನಸ್ಸು ಶಾಂತಗೊಳ್ಳುತ್ತದೆ. ನಿಯಮಿತ ಅಭ್ಯಾಸದಿಂದ ಚಡಪಡಿಕೆ, ಆತಂಕ ಕಡಿಮೆಯಾಗುತ್ತದೆ ಮತ್ತು ಉತ್ತಮ ನಿದ್ರೆ ದೊರೆಯುತ್ತದೆ.
ಒತ್ತಡ ಕಡಿಮೆ
ಒತ್ತಡದಲ್ಲಿರುವಾಗ ದೇಹದಲ್ಲಿ ಕಾರ್ಟಿಸೋಲ್ ಮತ್ತು ಅಡ್ರಿನಾಲಿನ್ ಹಾರ್ಮೋನ್‌ಗಳು ಹೆಚ್ಚಾಗಿ ಬಿಡುಗಡೆ ಆಗುತ್ತವೆ. ಇದು ದೀರ್ಘಾವಧಿಯಲ್ಲಿ ಖಿನ್ನತೆಯಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಮಲಗುವ ಮುನ್ನ ಧ್ಯಾನ ಮಾಡುವುದರಿಂದ ಕಾರ್ಟಿಸೋಲ್ ಮಟ್ಟ ಕಡಿಮೆಯಾಗಲು ಸಹಾಯವಾಗುತ್ತದೆ.
ಮೆದುಳಿನ ಚಟುವಟಿಕೆ ಸುಧಾರಣೆ
ನಿಯಮಿತ ಧ್ಯಾನವು ಮೆದುಳಿನ ಹಿಪೊಕ್ಯಾಂಪಸ್ ಭಾಗಕ್ಕೆ ರಕ್ತಪ್ರವಾಹ ಹೆಚ್ಚಿಸಲು ಸಹಕಾರಿ ಎಂದು ಅಧ್ಯಯನಗಳು ಸೂಚಿಸುತ್ತವೆ. ಎಂಟು ವಾರಗಳ ಕಾಲ ನಿರಂತರ ಧ್ಯಾನ ಮಾಡಿದರೆ ಗಮನ, ಸ್ಮರಣಶಕ್ತಿ ಮತ್ತು ಮನೋನಿಬಂಧನೆ ಸುಧಾರಿಸಬಹುದು.
ಖಿನ್ನತೆ ಮತ್ತು ಆತಂಕ ನಿಯಂತ್ರಣ
ಧ್ಯಾನವು ಭಾವನಾತ್ಮಕ ಸಮತೋಲನವನ್ನು ಹೆಚ್ಚಿಸುತ್ತದೆ. ನಕಾರಾತ್ಮಕ ಚಿಂತನೆಗಳನ್ನು ಕಡಿಮೆ ಮಾಡುತ್ತದೆ. ಇದರಿಂದ ಖಿನ್ನತೆ ಮತ್ತು ಆತಂಕದ ಲಕ್ಷಣಗಳು ತಗ್ಗಲು ಸಹಾಯವಾಗುತ್ತದೆ.
ಒಟ್ಟಿನಲ್ಲಿ, ಬೆಳಿಗ್ಗೆ ಸಾಧ್ಯವಾಗದಿದ್ದರೂ ರಾತ್ರಿ ಮಲಗುವ ಮುನ್ನ ಧ್ಯಾನ ಅಭ್ಯಾಸ ಮಾಡುವುದು ಮಾನಸಿಕ ಆರೋಗ್ಯಕ್ಕೆ ಉತ್ತಮ. ದಿನಕ್ಕೆ ಕೇವಲ ಕೆಲವು ನಿಮಿಷಗಳನ್ನು ಮೀಸಲಿಟ್ಟರೂ ದೀರ್ಘಾವಧಿಯಲ್ಲಿ ಅದರ ಲಾಭಗಳು ಸ್ಪಷ್ಟವಾಗುತ್ತವೆ.



