ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ : ಇಲ್ಲಿಯ ದಂಡಿನ ದುರ್ಗಾದೇವಿ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ಹಮ್ಮಿಕೊಂಡಿದ್ದ ಸಾಮೂಹಿಕ ಸೀಮಂತ ಕಾರ್ಯಕ್ರಮದಲ್ಲಿ ಮುಸ್ಲಿಂ ಗರ್ಭಿಣಿಗೆ ಹಿಂದೂ ಸಂಪ್ರದಾಯದಂತೆ ಸೀಮಂತ ನೆರವೇರಿಸಿದ್ದು ಭಾವೈಕ್ಯತೆಯ ಸಂದೇಶ ಸಾರಿತು.
24ನೇ ವರ್ಷದ ದೇವಿ ಪುರಾಣ ಕಾರ್ಯಕ್ರಮದಂಗವಾಗಿ ದಂಡಿನ ದುಗಾದೇವಿ ಸೇವಾ ಸಮಿತಿಯು ಗ್ರಾಮದ 11 ವಾರ್ಡ್ಗಳ 14 ಗರ್ಭಿಣಿಯರಿಗೆ ಹಿಂದೂ ಸಂಪ್ರದಾಯದಂತೆ ಸೀಮಂತ ಕಾರ್ಯಕ್ರಮ ನೆರವೇರಿಸಿದರು.
ವಿವಿಧ ಓಣಿಯ 14 ಜನ ಗರ್ಭಿಣಿಯರು ದುರ್ಗಾದೇವಿ ದೇವಸ್ಥಾನದಲ್ಲಿ ಅಂಗನವಾಡಿ ಕಾರ್ಯಕರ್ತರು ಕೊಡುಗೆಯಾಗಿ ನೀಡಿದ ಒಂದೇ ಬಣದ್ಣ ಸೀರೆಯನ್ನುಟ್ಟು ಒಂದೇ ಕಡೆ ಆಸೀನರಾಗಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮಕ್ಕೆ ಆಗಮಿಸಿದ್ದ ಮುತ್ತೈದೆಯರೆಲ್ಲರೂ ಅರಿಶಿಣ, ಕುಂಕಮ ಹಚ್ಚಿ, ಹಸಿರು ಬಳೆ, ಹೂವಿನ ದಂಡೆ ಹಾಕಿ ಉಡಿ ತುಂಬಿ ಆರತಿ ಬೆಳಗಿದರು. ಸೀಮಂತ ಕಾರ್ಯದಲ್ಲಿ ಭಾಗಿಯಾದ ಗರ್ಭಿಣಿಯರು, ನಮ್ಮ ಮನೆಯಲ್ಲಾದರೂ ಇಷ್ಟೊಂದು ಸಡಗರ, ಸಂಭ್ರಮ, ಸಂಪ್ರದಾಯ ಇರುತ್ತಿರಲಿಲ್ಲ. ಗ್ರಾಮದ ನೂರಾರು ಮುತ್ತೈದೆಯರು ಆರತಿ ಬೆಳಗಿ ಆಶೀರ್ವಾದ ಮಾಡಿದ್ದು ಅತೀವ ಸಂತೋಷವಾಯಿತು ಎಂದು ಸಂತಸಪಟ್ಟರು.
ಸೇರಿದ ಮಹಿಳೆಯರು ಸಂಪ್ರದಾಯದಂತೆ ಸೋಬಾನ ಪದ ಹಾಡುವದರೊಂದಿಗೆ ಕಾರ್ಯಕ್ರಮಕ್ಕೆ ಕಳೆ ತಂದರು.
ಸಂಗೀತಗಾರರಾದ ಅಂದಪ್ಪ ಮೆಣಸಿನಕಾಯಿ, ಮಂಜುನಾಥ ಗರ್ಜಪ್ಪನವರ ಸೀಮಂತ ಕಾರ್ಯಕ್ರಮಕ್ಕೆ ಸಂಬಂಧಿಸಿದ ಜಾನಪದ ಹಾಡುಗಳು ಗಮನ ಸೆಳೆದವು. ಕೊಟ್ರಯ್ಯಶಾಸ್ತ್ರೀಗಳು ನರಗುಂದಮಠ ಅವರು ದೇವಿ ಪುರಾಣದ 10ನೇ ಅಧ್ಯಾಯದ ಪ್ರವಚನವನ್ನು ಅರ್ಥಗರ್ಭಿತವಾಗಿ ವಿವರಿಸಿದರು.
ದುರ್ಗಾದೇವಿ ಸೇವಾ ಸಮಿತಿಯ ಕಾರ್ಯದರ್ಶಿಯಾಗಿ ಕಳೆದ 24 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನಜೀರಅಹ್ಮದ ಕಿರಿಟಗೇರಿ ಅವರ ಸೇವೆಯು ಕೋಮು ಸೌರ್ಹರ್ದತೆಗೆ ಸಾಕ್ಷಿಯಾಗಿದೆ. ರುದ್ರಪ್ಪ ಮುಸ್ಕಿನಭಾವಿ ಅಧ್ಯಕ್ಷರಾಗಿದ್ದು, 11 ಜನ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮುಂದಿನ ವರ್ಷ ದೇವಿ ಪುರಾಣವು 25 ವರ್ಷ ಪೂರೈಸುತ್ತಿದ್ದು ಬೆಳ್ಳಿ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದೆ ಎಂದು ಸಮಿತಿಯ ಪದಾಧಿಕಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ನಮ್ಮ ಕುಟುಂಬ ಮತ್ತು ಸಮುದಾಯದಲ್ಲಿ ಗರ್ಭಿಣಿಯರಿಗೆ ಸೀಮಂತ ಮಾಡುವ ಸಂಪ್ರದಾಯವಿಲ್ಲ. ಆದರೆ ದುರ್ಗಾದೇವಿಯ ಸನ್ನಿಧಿಯಲ್ಲಿ ಹಿಂದೂ ಸಂಪ್ರದಾಯದಂತೆ ಸೀಮಂತ ಕಾರ್ಯ ನೆರವೇರಿಸಿದ್ದು ಸಂತಸ ತಂದಿದೆ.
– ರುಬಿನಾ ಖಾಜಾಹುಸೇನ.
ಲಕ್ಕುಂಡಿ.