‘ಸಹರ’ ಸಿನಿಮಾ ಮೂಲಕ ನಿರ್ದೇಶಕರಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿರುವ ಮಂಜೇಶ್ ಭಾಗವತ್ ಹೊಸ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಸದ್ದಿಲ್ಲದೇ ಎರಡನೇ ಚಿತ್ರ ಶೂಟಿಂಗ್ ಮುಗಿಸಿರುವ ಅವರೀಗ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.
ಮಂಜೇಶ್ ಎರಡನೇ ಹೆಜ್ಜೆಗೆ ಕನಸೊಂದು ಶುರುವಾಗಿದೆ ಎಂಬ ಟೈಟಲ್ ಇಡಲಾಗಿದೆ. ದೊಡ್ಮನೆ ಸೊಸೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಹೊಸಬರ ಕನಸಿಗೆ ಜೊತೆಯಾಗಿದ್ದಾರೆ. ಕನಸೊಂದು ಶುರುವಾಗಿದೆ ಶೀರ್ಷಿಕೆ ಬಿಡುಗಡೆ ಮಾಡಿ ಇಡೀ ತಂಡಕ್ಕೆ ಶುಭಾಶಯ ಕೋರಿದ್ದಾರೆ.
ಕನಸೊಂದು ಶುರುವಾಗಿದೆ ಸಿನಿಮಾ ಮೂಲಕ ಸಂತೋಷ್ ಬಿಲ್ವಾ ನಾಯಕನಾಗಿ ಅದೃಷ್ಟ ಪರೀಕ್ಷೆಗಿಳಿದ್ದು, ಅವರಿಗೆ ಜೋಡಿಯಾಗಿ ಸಾತ್ವಿಕಾ ಕಾಣಿಸಿಕೊಂಡಿದ್ದಾರೆ. ಥ್ರಿಲ್ಲರ್ ಮಂಜು, ಕುರಿ ಸುನಿಲ್ ತಾರಾಬಳಗದಲ್ಲಿದ್ದಾರೆ.
ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಕನಸೊಂದು ಶುರುವಾಗಿದೆ ಚಿತ್ರವನ್ನು ಬೆಂಗಳೂರು, ಕುಂದಾಪುರ, ಕುಣಿಗಲ್ ಸುತ್ತಮುತ್ತ ಚಿತ್ರೀಕರಿಸಲಾಗಿದೆ. ಈಗಾಗಲೇ ಚಿತ್ರದ ಶೂಟಿಂಗ್ ಮುಕ್ತಾಯಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ.
KKR ಮೀಡಿಯಾ ಬ್ಯಾನರ್ ನಡಿ ಲಕ್ಷ್ಮೀ ಕಾಂತ್ ರೆಡ್ಡಿ ಎಸ್ ಕನಸೊಂದು ಶುರುವಾಗಿದೆ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಲೋಕೇಂದ್ರ ಸೂರ್ಯ ಛಾಯಾಗ್ರಹಣ, ಸೂರಜ್ ಜೋಯಿಸ್ ಸಂಗೀತ, ದೀಪಕ್ ಸಿಎಸ್ ಗೌಡ ಸಂಕಲನ ಚಿತ್ರಕ್ಕಿದೆ. ಶಶಾಂಕ್, ಸಿಂಪಲ್ ಸುನಿ ಹಾಗೂ ಪ್ರಮೋದ್ ಮರವಂತೆ ಹಾಡುಗಳಿಗೆ ಸಾಹಿತ್ಯ ಬರೆದಿದ್ದು, ಸೋನು ನಿಗಂ, ರಾಜೇಶ್ ಕೃಷ್ಣನ್ ಹಾಗೂ ವಾಸುಕಿ ವೈಭವ್ ಹಾಡುಗಳಿಗೆ ಧ್ವನಿಯಾಗಿದ್ದಾರೆ.