ಜಪಾನ್ನ ಐಚಿ–ನಗೋಯಾದಲ್ಲಿ ನಡೆಯಲಿರುವ 2026ರ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಕ್ರಿಕೆಟ್ ಟೂರ್ನಿಗಾಗಿ ಭಾರತ ಮಹಿಳಾ ತಂಡವನ್ನು ಪ್ರಕಟಿಸಲಾಗಿದೆ.
15 ಸದಸ್ಯರ ಈ ಬಲಿಷ್ಠ ತಂಡವನ್ನು ಹರ್ಮನ್ಪ್ರೀತ್ ಕೌರ್ ಮುನ್ನಡೆಸಲಿದ್ದು, ಸ್ಮೃತಿ ಮಂಧಾನ ಉಪನಾಯಕಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಈ ಬಾರಿ ತಂಡದಲ್ಲಿ 17 ವರ್ಷದ ಯುವ ವಿಕೆಟ್ ಕೀಪರ್–ಬ್ಯಾಟರ್ ಜಿ. ಕಮಲಿನಿ ಅವರಿಗೆ ಸ್ಥಾನ ದೊರೆತಿದ್ದು, ಇದು ಪ್ರಮುಖ ಆಯ್ಕೆಯಾಗಿ ಗಮನ ಸೆಳೆದಿದೆ. ಮತ್ತೊಂದೆಡೆ, ಮಹಿಳಾ ಟಿ20 ವಿಶ್ವಕಪ್ ತಂಡದಲ್ಲಿದ್ದ ಯಾಸ್ತಿಕಾ ಭಾಟಿಯಾ ಅವರನ್ನು ಈ ಬಾರಿ ತಂಡದಿಂದ ಕೈಬಿಡಲಾಗಿದೆ.
ಬಿಸಿಸಿಐ ಮೂಲಗಳ ಪ್ರಕಾರ, ಕ್ರಾಂತಿ ಗೌಡ್, ರೇಣುಕಾ ಠಾಕೂರ್, ದೀಪ್ತಿ ಶರ್ಮಾ, ಜೆಮಿಮಾ ರೋಡ್ರಿಗಸ್ ಸೇರಿದಂತೆ ಅನುಭವ ಹಾಗೂ ಯುವಶಕ್ತಿಯ ಸಂಯೋಜನೆಯೊಂದಿಗೆ ಬಲಿಷ್ಠ ತಂಡವನ್ನು ರೂಪಿಸಲಾಗಿದೆ.
ಗಾಯದ ಕಾರಣದಿಂದ ಟಿ20 ವಿಶ್ವಕಪ್ ವೇಳೆ ಹೊರಗಿದ್ದ ಶ್ರೇಯಾಂಕಾ ಪಾಟೀಲ್ ಅವರನ್ನು ಕೂಡ ಆಯ್ಕೆ ಮಾಡಲಾಗಿದೆ. ಆದರೆ ಅವರು ಟೂರ್ನಿಗೆ ಮೊದಲು ಫಿಟ್ನೆಸ್ ಕ್ಲಿಯರೆನ್ಸ್ ಪಡೆಯಬೇಕಿದ್ದು, ಇಲ್ಲವಾದರೆ ಅವರ ಬದಲಿಗೆ ಮತ್ತೊಬ್ಬರನ್ನು ಆಯ್ಕೆ ಮಾಡಲಾಗುತ್ತದೆ.
ಭಾರತ ಮಹಿಳಾ ತಂಡ:
ಹರ್ಮನ್ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗಸ್, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್ ಕೀಪರ್), ಜಿ. ಕಮಲಿನಿ (ವಿಕೆಟ್ ಕೀಪರ್), ಭಾರತಿ ಫುಲ್ಮಾಲಿ, ಶ್ರೀ ಚರಣಿ, ರೇಣುಕಾ ಠಾಕೂರ್, ಕ್ರಾಂತಿ ಗೌಡ್, ಅರುಂಧತಿ ರೆಡ್ಡಿ, ರಾಧಾ ಯಾದವ್, ನಂದಿನಿ ಶರ್ಮಾ, ಶ್ರೇಯಾಂಕಾ ಪಾಟೀಲ್.
ಈ ಏಷ್ಯನ್ ಗೇಮ್ಸ್ ಕ್ರಿಕೆಟ್ ಪಂದ್ಯಗಳು 2026ರ ಸೆಪ್ಟೆಂಬರ್ 17ರಿಂದ ಅಕ್ಟೋಬರ್ 3ರವರೆಗೆ ಟಿ20 ಸ್ವರೂಪದಲ್ಲಿ ನಡೆಯಲಿವೆ. ಮಹಿಳಾ ವಿಭಾಗದಲ್ಲಿ ಒಟ್ಟು 8 ತಂಡಗಳು ಭಾಗವಹಿಸಲಿದ್ದು, ಭಾರತ ತಂಡ ನೇರವಾಗಿ ಕ್ವಾರ್ಟರ್ ಫೈನಲ್ನಿಂದ ತನ್ನ ಅಭಿಯಾನ ಆರಂಭಿಸಲಿದೆ.
ಮೊದಲ ಪಂದ್ಯದಲ್ಲಿ ಭಾರತ ತಂಡವು ಕ್ವಾಲಿಫೈಯರ್ ಹಂತದಿಂದ ಬಂದ ಕಡಿಮೆ ಶ್ರೇಯಾಂಕದ ತಂಡದ ವಿರುದ್ಧ (ಥಾಯ್ಲೆಂಡ್, ಮಲೇಷ್ಯಾ ಅಥವಾ ಚೀನಾ) ಎದುರಿಸಲಿದೆ ಎಂದು ನಿರೀಕ್ಷಿಸಲಾಗಿದೆ.



