ಬೆಂಗಳೂರು: ಸೀರೆ ಕದ್ದಿದ್ದಾಳೆಂದು ಆರೋಪಿಸಿ ಬಟ್ಟೆ ಅಂಗಡಿ ಮಾಲೀಕನೊಬ್ಬ ಮಹಿಳೆಯನ್ನು ನಡುರಸ್ತೆಯಲ್ಲೇ ಮನಬಂದಂತೆ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಗಡಿ ಮಾಲೀಕ ಸೇರಿದಂತೆ ಇಬ್ಬರು ಆರೋಪಿಗಳನ್ನು ಕೆ.ಆರ್. ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
Advertisement
ಆಂಧ್ರಪ್ರದೇಶದ ಗುಂತಕಲ್ ಮೂಲದ ಹಂಪಮ್ಮ ಹಲ್ಲೆಗೊಳಗಾಗಿದ್ದ ಮಹಿಳೆಯಾಗಿದ್ದು, ಚಿಕ್ಕಪೇಟೆಯ ಅವೆನ್ಯೂ ರಸ್ತೆಯಲ್ಲಿರುವ ಮಾಯಾ ಸಿಲ್ಕ್ ಆ್ಯಂಡ್ ಸಾರೀಸ್ ಅಂಗಡಿ ಮಾಲೀಕ ಉಮೇದ್ ಕುಮಾರ್, ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಹೇಂದ್ರ ಸೀರ್ವಿ ಎಂಬುವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಬೆಂಗಳೂರಿನ ಸಿಟಿ ಮಾರ್ಕೆಟ್ ಠಾಣೆ ವ್ಯಾಪ್ತಿಯ ಅವೆನ್ಯೂ ರಸ್ತೆಯಲ್ಲಿದ್ದ ಬಟ್ಟೆ ಅಂಗಡಿ ಮಾಲೀಕ ಬಾಬುಲಾಲ್ ಎಂಬಾತ ಮಹಿಳೆಯೊಬ್ಬವಳು ಅಂಗಡಿಯಲ್ಲಿ ಸೀರೆಯನ್ನು ಕದ್ದಿದ್ದಾಳೆ ಎಂದು ಆರೋಪಿಸಿ, ಆಕೆಯನ್ನು ಬೆನ್ನಟ್ಟಿ ಹೊರಬಂದು ನಡುರಸ್ತೆಯಲ್ಲಿ ಎಳೆದಾಡಿ ಮನಬಂದಂತೆ ಥಳಿಸಿದ್ದಾರೆ.
ಕೈಕಾಲುಗಳಿಗೆ ಥಳಿಸಿದ್ದು ಮಾತ್ರವಲ್ಲದೆ, ಬೂಟುಗಾಲಿನಿಂದ ಮಹಿಳೆಯ ಎದೆಯ ಭಾಗಕ್ಕೂ ಒದ್ದಿದ್ದಾರೆ. ನೋವಿನಿಂದ ಅಳುತ್ತಾ, ಬೇಡಿಕೊಂಡರೂ ಬಿಡದೆ ಹಲ್ಲೆ ಮಾಡಿದ್ದಾರೆ. ಸದ್ಯ ಥಳಿಸಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರೀ ಆಕ್ರೋಶಕ್ಕೆ ಗುರಿಯಾಗಿದೆ.