ಕಾರವಾರ: ಆದಾಯಕ್ಕಿಂತ ಹೆಚ್ಚು ಆಸ್ತಿ ಹಾಗೂ ಹಣ ಸಂಗ್ರಹ ಆರೋಪದ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಮತ್ತು ಹಳಿಯಾಳ ತಾಲೂಕುಗಳ ವಿವಿಧೆಡೆ ಲೋಕಾಯುಕ್ತ ಪೊಲೀಸರು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.
ಸಿದ್ದಾಪುರ ತಾಲ್ಲೂಕಿನ ಕೋಲಸಿರ್ಸಿ ಗ್ರೂಪ್ ಗ್ರಾಮ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಮಾರುತಿ ಯಶವಂತ ಮಾಲ್ವಿ ಅವರಿಗೆ ಸೇರಿದ ಮನೆ, ಕಚೇರಿ ಹಾಗೂ ಅಂಗಡಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಶೋಧ ನಡೆಸಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ಪತ್ತೆಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಲೋಕಾಯುಕ್ತ ಅಧಿಕಾರಿಗಳು ಮಾರುತಿ ಮಾಲ್ವಿ ಅವರಿಗೆ ಸೇರಿದ ಒಟ್ಟು ನಾಲ್ಕು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಹಳಿಯಾಳದಲ್ಲಿ ಎರಡು ಕಡೆ ಹಾಗೂ ಸಿದ್ದಾಪುರದಲ್ಲಿ ಒಂದು ಕಡೆ ದಾಳಿ ನಡೆದಿದೆ. ಸಿದ್ದಾಪುರದಲ್ಲಿ ಲೋಕಾಯುಕ್ತ ಪಿ.ಐ. ವಿನಾಯಕ ಬಿಲ್ಲವ ಅವರ ನೇತೃತ್ವದಲ್ಲಿ ಮತ್ತು ಹಳಿಯಾಳದಲ್ಲಿ ಡಿವೈಎಸ್‌ಪಿ ಧನ್ಯಾ ನಾಯಕ್ ಅವರ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಉಡುಪಿ, ಮಂಗಳೂರು ಹಾಗೂ ಕಾರವಾರ ಲೋಕಾಯುಕ್ತ ತಂಡಗಳು ಪಾಲ್ಗೊಂಡಿದ್ದವು.
ಲೋಕಾಯುಕ್ತ ಕಚೇರಿಯ ಅಧಿಕೃತ ಪ್ರಕಟಣೆಯ ಪ್ರಕಾರ, ಶೋಧದ ವೇಳೆ ಮಾರುತಿ ಯಶವಂತ ಮಾಲ್ವಿ ಅವರಿಗೆ ಸಂಬಂಧಿಸಿದಂತೆ 7 ನಿವೇಶನಗಳು, 4 ವಾಸದ ಮನೆಗಳು ಹಾಗೂ 1 ವಾಣಿಜ್ಯ ಸಂಕೀರ್ಣ ಪತ್ತೆಯಾಗಿದೆ. ಇವುಗಳ ಅಂದಾಜು ಮೌಲ್ಯ 9.17 ಕೋಟಿ ರೂ. ಆಗಿದೆ.
ಇದಕ್ಕೂ ಜೊತೆಗೆ 2,02,244 ರೂ. ನಗದು, 8,22,310 ರೂ. ಮೌಲ್ಯದ ಚಿನ್ನಾಭರಣಗಳು ಹಾಗೂ 62 ಲಕ್ಷ ರೂ. ಮೌಲ್ಯದ ವಾಹನಗಳು ಸೇರಿ ಒಟ್ಟು 72,24,554 ರೂ. ಮೌಲ್ಯದ ಚರಾಸ್ತಿ ಪತ್ತೆಯಾಗಿದೆ. ಇದರಿಂದ ಒಟ್ಟಾರೆ ಪತ್ತೆಯಾದ ಆಸ್ತಿಯ ಮೌಲ್ಯ 9,89,33,554 ರೂ. ಆಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಸಂಬಂಧಿತ ದಾಖಲೆಗಳ ಪರಿಶೀಲನೆ ಮುಂದುವರಿದಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.



