ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯ ಗುಂಡ್ಲುಪೇಟೆ-ಊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಡಾನೆಗೆ ಲಾರಿ ಡಿಕ್ಕಿ ಹೊಡೆಯಲು ಯತ್ನಿಸಿದ ಘಟನೆ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಕೇರಳ ಮೂಲದ ಲಾರಿ ಚಾಲಕನಿಗೆ ₹5 ಸಾವಿರ ದಂಡ ವಿಧಿಸಿದೆ.
ಗುಂಡ್ಲುಪೇಟೆ-ಊಟಿ ಮಾರ್ಗದಲ್ಲಿ ಲಾರಿ ಸಂಚರಿಸುತ್ತಿದ್ದ ವೇಳೆ ಕಾಡಿನಿಂದ ಬಂದ ಕಾಡಾನೆಯೊಂದು ರಸ್ತೆ ದಾಟಲು ಮುಂದಾಗಿದೆ. ಈ ವೇಳೆ ರಸ್ತೆಯಲ್ಲಿದ್ದ ಆನೆಯನ್ನು ಕಂಡರೂ ಚಾಲಕ ವೇಗವನ್ನು ಕಡಿಮೆ ಮಾಡದೆ, ಆನೆಗೆ ಡಿಕ್ಕಿ ಹೊಡೆಯುವ ರೀತಿಯಲ್ಲಿ ಲಾರಿಯನ್ನು ಮುನ್ನುಗ್ಗಿಸಿದ್ದಾನೆ ಎನ್ನಲಾಗಿದೆ.
ಈ ದೃಶ್ಯ ಲಾರಿಯ ಹಿಂಭಾಗದಲ್ಲಿ ಬರುತ್ತಿದ್ದ ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ವೀಡಿಯೋ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡಿದ್ದಾರೆ.
ವನ್ಯಜೀವಿ ಪ್ರದೇಶದಲ್ಲಿ ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿದ್ದಕ್ಕಾಗಿ ಚಾಲಕನಿಗೆ ದಂಡ ವಿಧಿಸುವುದರ ಜೊತೆಗೆ, ಇಂತಹ ಘಟನೆ ಮರುಕಳಿಸದಂತೆ ಲಿಖಿತ ಮುಚ್ಚಳಿಕೆ ಪತ್ರವನ್ನು ಬರೆಸಿಕೊಂಡು ಬಿಡುಗಡೆ ಮಾಡಲಾಗಿದೆ.
ಬಂಡೀಪುರ ಹಾಗೂ ನಾಗರಹೊಳೆ ಅಭಯಾರಣ್ಯಗಳ ವ್ಯಾಪ್ತಿಯ ಹೆದ್ದಾರಿಗಳಲ್ಲಿ ವನ್ಯಜೀವಿಗಳು ಕಾಣಿಸಿಕೊಂಡಾಗ ವಾಹನಗಳ ವೇಗವನ್ನು ಕಡಿಮೆ ಮಾಡಿ, ಅವುಗಳಿಗೆ ಸುರಕ್ಷಿತವಾಗಿ ರಸ್ತೆ ದಾಟಲು ಅವಕಾಶ ನೀಡಬೇಕು. ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.



