ಚಿಕ್ಕೋಡಿ: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಬಂದಿದ್ದ ಮಹಿಳೆಯ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ಮಾಡಲಾಗಿರುವ ಘಟನೆ ಅಥಣಿಯ ನ್ಯಾಯಾಲಯದ ಆವರಣದಲ್ಲಿ ನಡೆದಿದೆ. ಮೀನಾಕ್ಷಿ ರಾಮಚಂದ್ರ ಶಿಂಧೆ (50) ಹಲ್ಲೆಗೊಳಗಾದ ಮಹಿಳೆಯಾಗಿದ್ದು,
ಬಾಬಾಸಾಹೇಬ್ ಚೌಹಾಣ್ ಹಲ್ಲೆ ಮಾಡಿದ ಆರೋಪಿಯಾಗಿದ್ದಾನೆ. ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ನ್ಯಾಯಾಲಯಕ್ಕೆ ಮೀನಾಕ್ಷಿ ಆಗಮಿಸಿದ್ದು, ಮಹಿಳೆಯನ್ನು ಕಂಡ ಆರೋಪಿ ಬಾಬಾಸಾಹೇಬ್ ಆಕೆಯ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದಾನೆ. ಕೋತನಟ್ಟಿ ಗ್ರಾಮದಲ್ಲಿನ ಜಮೀನಿಗೆ ಸಂಬಂಧಿಸಿದಂತೆ ಈ ಘಟನೆ ನಡೆದಿದೆ.
ಘಟನೆಯಲ್ಲಿ ಮಹಿಳೆಯು ಗಂಭೀರವಾಗಿ ಗಾಯಗೊಂಡಿದ್ದು, ಸದ್ಯ ಆಕೆಯನ್ನು ಅಥಣಿ ಸಮುದಾಯದ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ. ಈ ಘಟನೆಯಿಂದಾಗಿ ಕೋರ್ಟ್ ಆವರಣದಲ್ಲಿ ಕೆಲಹೊತ್ತು ಆತಂಕದ ವಾತಾವರಣ ಉಂಟಾಗಿತ್ತು.


