ವಿಜಯಸಾಕ್ಷಿ ಸುದ್ದಿ, ಗದಗ : ಜುಲೈ 26ರಂದು ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದಿಂದ ನಗರದ ಕಿತ್ತೂರು ರಾಣಿ ಚನ್ನಮ್ಮ ಸರ್ಕಲ್‌ನಿಂದ ಬಸವೇಶ್ವರ ವೃತ್ತ, ಹುಯಿಲಗೋಳ ನಾರಾಯಣರಾವ್ ವೃತ್ತ, ಗಾಂಧಿ ಸರ್ಕಲ್ ಮಾರ್ಗವಾಗಿ ಕೆ.ಎಚ್. ಪಾಟೀಲ್ ಸಭಾಭವನದವರೆಗೆ ಜಾಗೃತಿ ಮೆರವಣಿಗೆ ಆಯೋಜಿಸಲಾಗಿದೆ ಎಂದು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಬಸಲಿಂಗಪ್ಪ ಮುಂಡರಗಿ ಮಾಹಿತಿ ನೀಡಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಮ್ಮು-ಕಾಶ್ಮೀರದ ಕಾರ್ಗಿಲ್ ಪ್ರದೇಶದಲ್ಲಿ ಪಾಕಿಸ್ತಾನದ ಸೈನಿಕರನ್ನು ನಮ್ಮ ವೀರ ಯೋಧರು ಹಿಮ್ಮೆಟ್ಟಿಸಿ ಯುದ್ಧದಲ್ಲಿ ಜಯ ಸಾಧಿಸಿದ್ದರು. ಇದರ ಅಂಗವಾಗಿ ಜುಲೈ 26ರಂದು ದೇಶಾದ್ಯಂತ ಕಾರ್ಗಿಲ್ ವಿಜಯೋತ್ಸವ ಆಚರಿಸುವುದರ ಜೊತೆಗೆ ಯುದ್ಧದಲ್ಲಿ ಮಡಿದ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತದೆ ಎಂದರು.
ಪ್ರತಿ ವರ್ಷ ಮಾಜಿ ಸೈನಿಕರು ಕಾರ್ಗಿಲ್ ವಿಜಯೋತ್ಸವವನ್ನು ನಗರದ ಹೃದಯ ಭಾಗದಲ್ಲಿರುವ ಗಾಂಧಿ ಸರ್ಕಲ್‌ನಲ್ಲಿ ಆಚರಿಸುತ್ತಾರೆ. ಆದರೆ ಈ ವಿಜಯೋತ್ಸವವನ್ನು ಬೀದಿ ನಾಟಕದ ರೀತಿ ಕೇವಲ ಮಾಜಿ ಸೈನಿಕರಷ್ಟೇ ಆಚರಿಸಬೇಕಾದ ಅನಿವಾರ್ಯತೆ ಇದೆ. ಯುವಕರು ವಿಜಯೋತ್ಸವದ ದಿನದಂದು ಕೇವಲ ತಮ್ಮ ವಾಟ್ಸಾಪ್ ಸ್ಟೇಟಸ್ ಮೂಲಕ ದೇಶಭಕ್ತಿ ತೋರಿಸುತ್ತಾರೆಯೇ ವಿನಃ ನಮ್ಮ ಜೊತೆ ಕೈಜೋಡಿಸುವುದಿಲ್ಲ ಎಂದು ಬಸಲಿಂಗಪ್ಪ ಮುಂಡರಗಿ ಸಾರ್ವಜನಿಕರ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಿವಪುತ್ರಪ್ಪ ಸಂಗನಾಳ, ವಿಜಯ ಬಡಿಗೇರ, ಮಲ್ಲಿಕಾರ್ಜುನ ಕೊರಕ್ಕನವರ, ಬೆಟ್ಟಪ್ಪ ಕುಂಬಾರ, ವೆಂಕಪ್ಪ ಕಲಹಾಳ, ಮಲ್ಲೆಶಪ್ಪ ಕೊಣ್ಣೂರ, ನಿಂಗಪ್ಪ ಚೊರಗತ್ತಿ, ಪ್ರಕಾಶ್ ಬಂಡಿಹಾಳ, ಸುಭಾಶ್ಚಂದ್ರ ಬಗರೆ, ಪ್ರವೀಣ ಹೂಗಾರ, ಮಂಗಲೇಶ್ ವಸ್ತ್ರದ, ಚಂದ್ರಶೇಖರಪ್ಪ ಬಿಳೆಯಲಿ, ಸಿದ್ದಲಿಂಗಪ್ಪ ಪಾಳೇದ, ಸಂಗಪ್ಪ ತಳವಾರ, ದಾವಲ್ ಅಂಗಡಿ ಸೇರಿದಂತೆ ಮಾಜಿ ಸೈನಿಕರು ಉಪಸ್ಥಿತರಿದ್ದರು.
ಒಬ್ಬ ಯೋಧ ಸುಮಾರು 18ರಿಂದ 25 ವರ್ಷಗಳವರೆಗೆ ತನ್ನ ಇಡೀ ಕುಟುಂಬವನ್ನು ಬಿಟ್ಟು ದೇಶ ರಕ್ಷಣೆಗಾಗಿ ಹೋರಾಟ ನಡೆಸಿ, ನಿವೃತ್ತಿಯ ನಂತರ ವಾಪಸ್ ಆಗುತ್ತಾನೆ. ನಂತರ ಅವನು ಉದ್ಯೋಗಕ್ಕಾಗಿ ಬೇರೆ ಜಿಲ್ಲೆಗಳಿಗೆ ಹೋಗುವ ಅನಿವಾರ್ಯತೆ ಇರುತ್ತದೆ. ಈಗಾಗಲೇ ಕುಟುಂಬ ಬಿಟ್ಟು ದೇಶ ಸೇವೆ ಮಾಡಿ ಬಂದ ಯೋಧ ನಿವೃತ್ತಿ ನಂತರವೂ ಕುಟುಂಬದ ಜೊತೆ ಕಾಲ ಕಳೆಯಲು ಸಾಧ್ಯವಾಗದು. ಹಾಗಾಗಿ, ನಿವೃತ್ತ ಯೋಧರಿಗೆ ಸ್ವಂತ ಜಿಲ್ಲೆಯಲ್ಲಿಯೇ ಕೆಲಸ ನೀಡುವುದರಿಂದ ಅವರ ಕುಟುಂಬದ ಜೊತೆ ಕಾಲ ಕಳೆಯಲು ಸಹಕಾರಿಯಾಗುತ್ತದೆ.
– ಎನ್.ಆರ್. ದೇವಾಂಗಮಠ.
ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷರು.ಸಾಮಾಜಿಕ ಕಾರ್ಯಕ್ರಮಕ್ಕೂ ಸೈ
ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಕೇವಲ ತಮ್ಮ ಒಳಿತಿಗಾಗಿ ಹೋರಾಟ ಮಾಡುತ್ತಿಲ್ಲ. ಬದಲಾಗಿ ಕಳೆದ 2-3 ವರ್ಷಗಳಿಂದ ಸ್ವಚ್ಛತಾ ಅಭಿಯಾನ, ಸಸಿ ನೆಡುವ ಕಾರ್ಯಕ್ರಮ, ವನ ಮಹೋತ್ಸವ ಕಾರ್ಯಕ್ರಮ ಸೇರಿದಂತೆ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದು, ಗದಗ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ಮಾಡುವ ಸಂಕಲ್ಪ ಹೊಂದಿದೆ ಎಂದು ಬಸಲಿಂಗಪ್ಪ ಮುಂಡರಗಿ ತಿಳಿಸಿದರು.