ಬೆಂಗಳೂರು: ಅಯೋಧ್ಯೆಯ ರಾಮಭಕ್ತರಾಗಿರುವ ಹಿರಿಯ ಉದ್ಯಮಿ ಸೈಬರ್ ವಂಚಕರ ಮೋಸಕ್ಕೆ ಒಳಗಾಗಿ ಸುಮಾರು 8.3 ಕೋಟಿ ರೂಪಾಯಿ ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಂತೆ ನಂಬಿಸಿ ಸೈಬರ್ ವಂಚಕರು ಈ ಹಣವನ್ನು ಪೀಕಿಸಿದ್ದಾರೆ.
ವಂಚನೆಗೆ ಒಳಗಾದವರು 71 ವರ್ಷದ ಉದ್ಯಮಿ ರಾಜೇಂದ್ರ ನಾಯ್ಡು. ಅವರು ಅಯೋಧ್ಯೆಯ ರಾಮಮಂದಿರಕ್ಕೆ ಬೆಳ್ಳಿ ಪೂಜಾ ಸಾಮಗ್ರಿಗಳನ್ನು ದೇಣಿಗೆ ನೀಡಿರುವ ಭಕ್ತರಾಗಿದ್ದಾರೆ. ಈ ಹಿಂದೆ ರಿಲಯನ್ಸ್ ಕ್ಯಾಪಿಟಲ್‌ನಲ್ಲಿ ಸಾಲ ಪಡೆದು ಅದನ್ನು ಸಂಪೂರ್ಣವಾಗಿ ತೀರಿಸಿದ್ದರು. ಆದ್ರೆ ನಾಯ್ಡು ಅವರ ಹಣಕಾಸು ವಿವರಗಳನ್ನು ಸಂಗ್ರಹಿಸಿಕೊಂಡಿದ್ದ ವಂಚಕರ ಜಾಲ, ಅವರಿಗೆ ಕರೆ ಮಾಡಿ ‘ನಿಮ್ಮ ಸಿಬಿಲ್ ಸ್ಕೋರ್ ಉತ್ತಮವಾಗಿದೆ’ ಎಂದು ನಂಬಿಸಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಪ್ರೇರೇಪಿಸಿದ್ದಾರೆ.
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಗಳಿಸುವ ಲಾಭವನ್ನು ದಾನ ಕಾರ್ಯಗಳಿಗೆ ಬಳಸಬೇಕು ಎಂಬ ಉದ್ದೇಶದಿಂದ ರಾಜೇಂದ್ರ ನಾಯ್ಡು ಹೂಡಿಕೆಗೆ ಮುಂದಾಗಿದ್ದರು. ರಿಲಯನ್ಸ್ ಕಂಪನಿಯ ಹೆಸರನ್ನು ಬಳಸಿಕೊಂಡು ನಂಬಿಕೆ ಮೂಡಿಸಿದ ವಂಚಕರು, ‘RARCLLPRO’ ಎಂಬ ಮೊಬೈಲ್ ಆ್ಯಪ್ ಇನ್‌ಸ್ಟಾಲ್ ಮಾಡುವಂತೆ ಸೂಚಿಸಿದ್ದಾರೆ.
ಆ್ಯಪ್‌ನಲ್ಲಿ ಹೂಡಿಕೆ ವಿವರಗಳು ಕಾಣಿಸುತ್ತಿದ್ದುದರಿಂದ ನಂಬಿದ ನಾಯ್ಡು ಮೊದಲ ಹಂತದಲ್ಲಿ 25 ಲಕ್ಷ ರೂಪಾಯಿಯನ್ನು RTGS ಮೂಲಕ ವರ್ಗಾಯಿಸಿದ್ದಾರೆ. ನಂತರ ಹಂತ ಹಂತವಾಗಿ ಒಟ್ಟು 8.3 ಕೋಟಿ ರೂಪಾಯಿ ಹಣವನ್ನು ಹೂಡಿಕೆ ಮಾಡಿದ್ದಾರೆ. ಆ್ಯಪ್‌ನಲ್ಲಿ ಈ ಹೂಡಿಕೆಗೆ 59.4 ಕೋಟಿ ರೂಪಾಯಿ ಲಾಭಾಂಶ ಬಂದಿದೆ ಎಂದು ತೋರಿಸಲಾಗಿತ್ತು.
ಈ ಮೊತ್ತದಲ್ಲಿ 15 ಕೋಟಿ ರೂಪಾಯಿಯನ್ನು ವಿತ್‌ಡ್ರಾ ಮಾಡಲು ಪ್ರಯತ್ನಿಸಿದಾಗ ಹಣ ಬಿಡುಗಡೆಯಾಗದೆ ಇದ್ದುದರಿಂದ ನಾಯ್ಡು ಅವರಿಗೆ ವಂಚನೆಯ ಅನುಮಾನ ಬಂದಿದೆ. ಈ ಕುರಿತು ಪ್ರಶ್ನಿಸಿದಾಗ ವಂಚಕರು, ಹಣ ವಿತ್‌ಡ್ರಾ ಮಾಡಲು ಶೇಕಡಾ 18 ರಷ್ಟು ಸೇವಾ ಶುಲ್ಕವಾಗಿ 2.70 ಕೋಟಿ ರೂಪಾಯಿ ಪಾವತಿಸಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.
ಇದರಿಂದ ಎಚ್ಚೆತ್ತ ರಾಜೇಂದ್ರ ನಾಯ್ಡು ತಕ್ಷಣ ರಾಷ್ಟ್ರೀಯ ಸೈಬರ್ ಕ್ರೈಂ ಸಹಾಯವಾಣಿ 1930ಕ್ಕೆ ಕರೆ ಮಾಡಿ ದೂರು ದಾಖಲಿಸಿದ್ದಾರೆ. ಬಳಿಕ ಬೆಂಗಳೂರು ದಕ್ಷಿಣ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿಯೂ ದೂರು ಸಲ್ಲಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ವಂಚಕರ ಖಾತೆಯಲ್ಲಿ ಇದ್ದ ಸುಮಾರು 61 ಲಕ್ಷ ರೂಪಾಯಿ ಹಣವನ್ನು ಫ್ರೀಜ್ ಮಾಡಿದ್ದಾರೆ. ಸೈಬರ್ ವಂಚಕರ ಜಾಲ ಪತ್ತೆಗಾಗಿ ತನಿಖೆ ಮುಂದುವರಿದಿದೆ.



