HomePolitics Newsಕೆಪಿಸಿಸಿ ಅಧ್ಯಕ್ಷ ಪಟ್ಟಕ್ಕೆ ಬಿ.ಕೆ. ಹರಿಪ್ರಸಾದ್ ಹೆಸರು ಫೈನಲ್?: ಸತೀಶ್ ಜಾರಕಿಹೊಳಿಗೆ ಹೈಕಮಾಂಡ್ ಶಾಕ್!

ಕೆಪಿಸಿಸಿ ಅಧ್ಯಕ್ಷ ಪಟ್ಟಕ್ಕೆ ಬಿ.ಕೆ. ಹರಿಪ್ರಸಾದ್ ಹೆಸರು ಫೈನಲ್?: ಸತೀಶ್ ಜಾರಕಿಹೊಳಿಗೆ ಹೈಕಮಾಂಡ್ ಶಾಕ್!

For Dai;y Updates Join Our whatsapp Group

Spread the love

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಸಚಿವ ಸ್ಥಾನಗಳ ಹಂಚಿಕೆ ಕುರಿತ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿರುವ ನಡುವೆಯೇ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದೆ. ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಕ ಮಾಡುವ ಬಗ್ಗೆ ಹೈಕಮಾಂಡ್ ಒಲವು ತೋರಿದೆ ಎನ್ನುವ ಮಾಹಿತಿ ಪಕ್ಷದ ವಲಯಗಳಿಂದ ಲಭ್ಯವಾಗಿದೆ.

ಮೂಲಗಳ ಪ್ರಕಾರ, ಕೆಪಿಸಿಸಿ ಅಧ್ಯಕ್ಷರ ಜವಾಬ್ದಾರಿ ವಹಿಸಿಕೊಳ್ಳುವಂತೆ ಕಾಂಗ್ರೆಸ್ ಹೈಕಮಾಂಡ್ ನಾಯಕರಿಂದಲೇ ಬಿ.ಕೆ. ಹರಿಪ್ರಸಾದ್ ಅವರಿಗೆ ದೂರವಾಣಿ ಕರೆ ಬಂದಿದ್ದು, ಎಂಎಲ್‌ಸಿ ಸ್ಥಾನ ಜತೆಗೆ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆ ನೀಡುವ ಕುರಿತು ಚರ್ಚೆ ನಡೆದಿರುವುದಾಗಿ ತಿಳಿದುಬಂದಿದೆ.

ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕೇರಲಿರುವುದು ಬಹುತೇಕ ಖಚಿತವಾದ ಬಳಿಕ, ಅವರು ನಿರ್ವಹಿಸುತ್ತಿರುವ ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಹಲವು ನಾಯಕರು ಆಕಾಂಕ್ಷಿಗಳಾಗಿ ಹೊರಹೊಮ್ಮಿದ್ದರು. ಈ ಪೈಕಿ ಸಚಿವ ಸತೀಶ್ ಜಾರಕಿಹೊಳಿ ಅವರ ಹೆಸರು ಪ್ರಮುಖವಾಗಿ ಕೇಳಿಬಂದಿತ್ತು.

ಆದರೆ, ಸಚಿವ ಸ್ಥಾನ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಎರಡನ್ನೂ ಬಯಸಿರುವುದು ಹೈಕಮಾಂಡ್‌ಗೆ ಮುಜುಗರ ಉಂಟುಮಾಡಿದೆ ಎನ್ನಲಾಗಿದೆ. ಇದೇ ವೇಳೆ, ಅಚ್ಚರಿಯ ಬೆಳವಣಿಗೆಯಾಗಿ ಬಿ.ಕೆ. ಹರಿಪ್ರಸಾದ್ ಅವರ ಹೆಸರು ಮುನ್ನೆಲೆಗೆ ಬಂದಿದ್ದು, ಇದೀಗ ಅವರೇ ಕೆಪಿಸಿಸಿ ಅಧ್ಯಕ್ಷರಾಗುವ ಸಾಧ್ಯತೆ ಹೆಚ್ಚಾಗಿದೆ.

ಬಿ.ಕೆ. ಹರಿಪ್ರಸಾದ್ ಅವರು ಕೂಡ ಸಚಿವ ಸ್ಥಾನಕ್ಕಾಗಿ ಆಕಾಂಕ್ಷಿಯಾಗಿದ್ದರು. ಆದರೆ ಪಕ್ಷದ ಸಂಘಟನೆಗೆ ಹೆಚ್ಚು ಒತ್ತು ನೀಡುವ ಉದ್ದೇಶದಿಂದ ಹೈಕಮಾಂಡ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವ ನಿರ್ಧಾರಕ್ಕೆ ಬಂದಿರುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಇದರ ನಡುವೆ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ಸತೀಶ್ ಜಾರಕಿಹೊಳಿ, ಪಕ್ಷ ಯಾವ ಜವಾಬ್ದಾರಿ ನೀಡಲಿದೆ ಎಂಬ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ ಎಂದು ತಿಳಿಸಿದ್ದಾರೆ.

“ಹೈಕಮಾಂಡ್‌ನಿಂದ ಅಧಿಕೃತ ಮಾಹಿತಿ ಬರುವವರೆಗೆ ಕಾಯಬೇಕು. ಪಕ್ಷದ ನಾಯಕತ್ವ ಯಾವ ತೀರ್ಮಾನ ಕೈಗೊಂಡರೂ ಅದನ್ನು ನಾನು ಸೇರಿದಂತೆ ಎಲ್ಲರೂ ಗೌರವಿಸಬೇಕು” ಎಂದು ಅವರು ಹೇಳಿದ್ದಾರೆ.

ಇದೇ ವೇಳೆ ತಮ್ಮ ವಿರುದ್ಧ ನಡೆದಿರುವ ಅಪಪ್ರಚಾರದ ಕುರಿತು ಮಾತನಾಡಿದ ಅವರು, “ಈ ಬಗ್ಗೆ ಪೊಲೀಸ್ ತನಿಖೆ ನಡೆಯುತ್ತಿದೆ. ಸತ್ಯಾಂಶ ಶೀಘ್ರದಲ್ಲೇ ಹೊರಬರಲಿದೆ” ಎಂದು ತಿಳಿಸಿದ್ದಾರೆ.

ಉಪ ಮುಖ್ಯಮಂತ್ರಿ ಹುದ್ದೆ ಕುರಿತು ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, “ಡಾ. ಜಿ. ಪರಮೇಶ್ವರ್ ಅವರಿಗೆ ಡಿಸಿಎಂ ಸ್ಥಾನ ದೊರೆತರೆ ಉತ್ತಮ. ಅವರು ರಾಜ್ಯದ ಹಿರಿಯ ದಲಿತ ನಾಯಕರಾಗಿದ್ದು, ಆ ಹುದ್ದೆಗೆ ಅರ್ಹರು” ಎಂದು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯ ಕಾಂಗ್ರೆಸ್‌ನಲ್ಲಿ ಹುದ್ದೆಗಳ ಹಂಚಿಕೆ ಕುರಿತ ಅಂತಿಮ ತೀರ್ಮಾನಕ್ಕೆ ಹೈಕಮಾಂಡ್ ಸಿದ್ಧತೆ ನಡೆಸಿರುವ ಹಿನ್ನೆಲೆ, ಮುಂದಿನ ಕೆಲ ದಿನಗಳಲ್ಲಿ ಸಚಿವ ಸಂಪುಟ ರಚನೆ ಹಾಗೂ ಕೆಪಿಸಿಸಿ ಅಧ್ಯಕ್ಷರ ನೇಮಕಾತಿ ಕುರಿತು ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆ ಇದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!