ಗದಗ: ಅ.19ರಂದು ಲಕ್ಷ್ಮೇಶ್ವರ ಪಟ್ಟಣ ಬಂದ್ ಮಾಡುವುದು ಖಚಿತ ಎಂದು ಶ್ರೀರಾಮಸೇನೆ ರಾಜ್ಯ ಕಾರ್ಯದರ್ಶಿ ರಾಜು ಖಾನಪ್ಪನವರ್ ಹೇಳಿದರು. ಗದಗನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ದಸರಾ ಮೆರವಣಿಗೆ ವೇಳೆ ಅನ್ಯಕೋಮಿನ ಯುವಕರಿಂದ ಗೋಸಾವಿ ಸಮಾಜದ ಯುವಕರ ಮೇಲೆ ಹಲ್ಲೆಯಾಗಿದೆ.
ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಗೋಸಾವಿ ಸಮಾಜದ ಮೇಲೆ ಲಾಠಿ ಚಾರ್ಜ್ ಆಗಿದೆ. ಇದೆಲ್ಲದಕ್ಕೂ ಕಾರಣ, ಠಾಣೆಯ ಪಿಎಸ್ಐ ಈರಣ್ಣ ರಿತ್ತಿ ಆಗಿದ್ದು, ಅವರನ್ನು ಕೂಡಲೇ ಅಮಾನತು ಮಾಡುವಂತೆ ಒತ್ತಾಯಿಸಿದರು.
ಇನ್ನು ಈ ಬಂದ್ ಕರೆ ವಿರೋಧಿಸಿ ಮುಸ್ಲಿಂ ಹಾಗೂ ಹಿಂದೂ ಸಮಾಜದ ಮುಖಂಡರು ಸುದ್ದಿಗೋಷ್ಠಿ ನಡೆಸಿ ವಿರೋಧ ಮಾಡಿದ್ದಾರೆ. ಆದರೆ ಅ.19 ರಂದು ಲಕ್ಷ್ಮೇಶ್ವರ ಬಂದ್ ಮಾಡೋದಕ್ಕೆ ಸ್ಥಳಿಯರೇ ನಮಗೆಲ್ಲ ಬೆಂಬಲ ನೀಡುತ್ತಿದ್ದಾರೆ. ಬಂದ್‌ಗೆ ವಿರೋಧಿಸುತ್ತಿರುವವರು ಯಾರೂ ಸಹ ಸ್ಥಳೀಯ ನಾಯಕರಲ್ಲ.
ಇವರು ಮಾಡುವ ದಂಧೆಗೆಲ್ಲ ಪಿಎಸ್ಐ ಈರಣ್ಣ ರಿತ್ತಿ ಬೆಂಬಲ ಇದೆ. ಹೀಗಾಗಿ ಪಿಎಸ್‌ಐ ಪರವಾಗಿ ಇವರೆಲ್ಲ ನಿಂತಿದ್ದಾರೆ. ಅದೇನೆ ಇರಲಿ, ನಾವು ಮಾತ್ರ ಬಂದ್ ಮಾಡುವುದು ನೂರಕ್ಕೆ ನೂರರಷ್ಟು ಖಚಿತ, ನಿಮ್ಮ ಬಂಡವಾಳ ಬಯಲು ಮಾಡಲು ನಿಂತರೆ ಭಗವಂತ ಕಾಪಾಡಲು ಬಂದರೂ ಬಿಡಲ್ಲ ಎಂದು ಎಚ್ಚರಿಕೆ ನೀಡಿದರು.