HomeKarnataka Newsಬೆಂಗಳೂರು ಪೂರ್ವ ಶ್ರೀಮಂತ ಪಾಲಿಕೆ, ಐಟಿ-ಬಿಟಿ ತೆರಿಗೆ ಆದಾಯ ಈ ಭಾಗದ ಅಭಿವೃದ್ಧಿಗೆ ಬಳಕೆ: DK...

ಬೆಂಗಳೂರು ಪೂರ್ವ ಶ್ರೀಮಂತ ಪಾಲಿಕೆ, ಐಟಿ-ಬಿಟಿ ತೆರಿಗೆ ಆದಾಯ ಈ ಭಾಗದ ಅಭಿವೃದ್ಧಿಗೆ ಬಳಕೆ: DK ಶಿವಕುಮಾರ್

For Dai;y Updates Join Our whatsapp Group

Spread the love

ಬೆಂಗಳೂರು: “ಮುಂದಿನ ದಿನಗಳಲ್ಲಿ ಐಟಿ‌- ಬಿಟಿ ಕಂಪನಿಗಳ ಜೊತೆ ನಾನು ಹಾಗೂ ಐಟಿ, ಕೈಗಾರಿಕೆ, ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವರುಗಳು ಪ್ರತ್ಯೇಕವಾಗಿ ಸಭೆ ನಡೆಸಿ ಅವರ ಸಮಸ್ಯೆಗಳನ್ನು ಆಲಿಸುತ್ತೇವೆ. ಟೀಕೆ ಟಿಪ್ಪಣಿ ಮಾಡುವವರಿಗೆ ನಮ್ಮ ಕೆಲಸವೇ ಉತ್ತರ ನೀಡುತ್ತದೆ. ನಾವು ನಮ್ಮ ಪಾಡಿಗೆ ಕೆಲಸ ಮಾಡಿಕೊಂಡು ಹೋಗುತ್ತೇವೆ. ನಾವು ಟೀಕೆಗಳಿಗೆ‌ ತಲೆ‌ಕೆಡಿಸಿಕೊಳ್ಳುವುದಿಲ್ಲ. ಭಗವಂತ ಹಾಗೂ ಜನರು ನಮಗೆ ಆಶೀರ್ವಾದ ಮಾಡಿದ್ದು, ನಾವು ಅವರ ಸೇವೆ ಮಾಡುತ್ತೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಬೆಂಗಳೂರಿನ ಕೆ ಆರ್ ಪುರಂನ ಟಿ.ಸಿ. ಪಾಳ್ಯದ ವೆಂಗಯ್ಯ ಪಾರ್ಕ್ ನಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಶನಿವಾರ “ಬೆಂಗಳೂರು ನಡಿಗೆ” ಅಭಿಯಾನದ ಅಂಗವಾಗಿ “ನಾಗರಿಕರೊಂದಿಗೆ ಸಂವಾದ” ನಡೆಸಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು.

“ನೂತನ ಐದು ಪಾಲಿಕೆಗಳು ಬೆಂಗಳೂರಿನ ಅಭಿವೃದ್ಧಿಯಲ್ಲಿ ಇತಿಹಾಸ ಸೃಷ್ಟಿಸಲಿವೆ. ಬೆಂಗಳೂರು ನಗರದಿಂದ 6 ಸಾವಿರ ಕೋಟಿ ತೆರಿಗೆ ಸಂಗ್ರಹವಾಗುತ್ತಿದೆ. ಇದರಲ್ಲಿ ಬೆಂಗಳೂರು ನಗರ ಪೂರ್ವ ಪಾಲಿಕೆ 1600 ಕೋಟಿ ರೂಪಾಯಿ ಪಾಲು ಹೊಂದಿದೆ. ಈ ಮೊದಲು ಎಲ್ಲಾ ಭಾಗಗಳ ತೆರಿಗೆ ಹಂಚಿಕೆಯಾಗುತ್ತಾ ಇತ್ತು. ಈಗ ಆಯಾ ಪ್ರದೇಶಗಳ ತೆರಿಗೆ ಅಲ್ಲಿಯೇ ವಿನಿಯೋಗವಾಗಲಿದೆ” ಎಂದು ತಿಳಿಸಿದರು.

ಬೆಂಗಳೂರು ಪೂರ್ವ ಶ್ರೀಮಂತ ಪಾಲಿಕೆ, ಇಲ್ಲಿನ ಐಟಿ-ಬಿಟಿ ತೆರಿಗೆ ಆದಾಯ ಈ ಭಾಗದ ಅಭಿವೃದ್ಧಿಗೆ ಬಳಕೆ

“ಕೆ.ಆರ್.ಪುರ ಹಾಗೂ ಮಹದೇವಪುರ ಒಳಗೊಂಡಿರುವ ಬೆಂಗಳೂರು ಪೂರ್ವ ಪಾಲಿಕೆ ಇಡೀ ರಾಜ್ಯದಲ್ಲಿ ಅತಿ ಹೆಚ್ಚು ಶ್ರೀಮಂತ ಪಾಲಿಕೆ. ಈ ಭಾಗದಲ್ಲಿ ಅನೇಕ ಐಟಿ ಬಿಟಿ ಕಂಪನಿಗಳಿದ್ದು, ಈ ಪ್ರದೇಶದ ಸಮಗ್ರ ಅಭಿವೃದ್ಧಿಗೆ 74ನೇ ತಿದ್ದುಪಡಿ ಅಡಿಯಲ್ಲಿ ಪಾಲಿಕೆ ರಚಿಸಿದ್ದು, ಮುಂದಿನ ದಿನಗಳಲ್ಲಿ ಅಭಿವೃದ್ಧಿಗೆ ಅಪಾರ ಹಣ ವಿನಿಯೋಗ ಮಾಡಬಹುದು. ಈ ಹಿಂದೆ ಒಂದೇ ಪಾಲಿಕೆ ಇದ್ದಾಗ ಈ ಭಾಗದಿಂದ ಬರುವ ತೆರಿಗೆ ಆದಾಯವನ್ನು ಬೆಂಗಳೂರಿನ ಇತರೆ ಭಾಗಗಳ ಅಭಿವೃದ್ಧಿಗೆ ಬಳಕೆಯಾಗುತ್ತಿತ್ತು. ಈಗ ಹೊಸ ಕಾಯ್ದೆ ಮೂಲಕ ಈ ಭಾಗದಲ್ಲಿ ಕ್ರೂಢೀಕರಣವಾಗುವ ಅಷ್ಟೂ ಸಂಪನ್ಮೂಲವನ್ನು ಈ ಪಾಲಿಕೆಯ 50 ವಾರ್ಡ್ ಗಳ ಅಭಿವೃದ್ಧಿಗೆ ನೀಡಲಾಗುವುದು. ಇದರಿಂದ ಈ ಭಾಗದ ಐಟಿ ವಲಯ ಹಾಗೂ ನಾಗರೀಕರಿಗೆ ಉತ್ತಮ ಸೌಲಭ್ಯ ಕಲ್ಪಿಸಬಹುದಾಗಿದೆ” ಎಂದು ಭರವಸೆ ನೀಡಿದರು.

“ಜನರ ಸಮಸ್ಯೆಗಳ‌ ಶೀಘ್ರ ‌ನಿವಾರಣೆಗೆ ನಮ್ಮ ಸರ್ಕಾರ ಹೆಜ್ಜೆ ಇಟ್ಟಿದೆ.‌ ಟೆಂಡರ್‌‌ ಇಲ್ಲದೇ ಪಾಲಿಕೆಯ ಕೌನ್ಸಿಲ್ 10 ಕೋಟಿ ಮೊತ್ತದ ಕಾಮಗಾರಿಗಳಿಗೆ ಹಾಗೂ ಪಾಲಿಕೆ ಆಯುಕ್ತರು 3 ಕೋಟಿ ರೂಪಾಯಿ ಖರ್ಚು ಮಾಡಲು ಅವಕಾಶ ನೀಡಲಾಗಿದೆ. ಬಿಬಿಎಂಪಿ ಇದ್ದಾಗ 10 ಕೋಟಿ ಖರ್ಚು ಮಾಡಬಹುದಾಗಿತ್ತು. ಈಗ ಆ ಹಣ 50 ಕೋಟಿಗೆ ಏರಿಕೆಯಾಗಿದೆ. ‌ಬೆಂಗಳೂರಿನ ಅಭಿವೃದ್ಧಿಗೆ ಐದು ಪಟ್ಟು ಹೆಚ್ಚು ಅವಕಾಶ ದೊರೆತಿದೆ” ಎಂದು ವಿವರಿಸಿದರು.

“ಬೆಂಗಳೂರಿನ ಜನತೆಗೆ ನಮ್ಮ ಸರ್ಕಾರ ದೀಪಾವಳಿ ಕೊಡುಗೆ ನೀಡಿದೆ. ಕಂದಾಯ ಭೂಮಿಯಲ್ಲಿ ಕಟ್ಟಿರುವ ಮನೆಗಳಿಗೆ ‘ಬಿ’ ಖಾತೆ ಹೊಂದಿರುವ ಹಾಗೂ ಹೊಂದಿರದವರು 500 ರೂಪಾಯಿ ಶುಲ್ಕ ಹಾಗೂ ಆಸ್ತಿ ಮೌಲ್ಯದ ಶೇ.5 ರಷ್ಟು ‌ಹಣ ಪಾವತಿ ಮಾಡಿದರೆ ‘ಎ‌‌’ ಖಾತೆ ನೀಡಲಾಗುವುದು” ಎಂದರು.

ಬಿ ಖಾತಾ ಇದ್ದವರಿಗೆ ಹಾಗೂ ಇಲ್ಲದವರಿಗೂ ಎ ಖಾತಾ ವಿತರಣೆ

“ಕೆ.ಆರ್‌‌ ಪುರಂ ಭಾಗದಲ್ಲಿ ರಸ್ತೆ ಒತ್ತುವರಿ ಪ್ರಕರಣಗಳು ಹೆಚ್ಚಿವೆ. ಒಬ್ಬೊಬ್ಬರು ಐದಾರು ನಿವೇಶಗಳಲ್ಲಿ ಅಕ್ರಮ ನಿರ್ಮಾಣಗಳನ್ನು ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅಕ್ರಮವಾಗಿ ಕಟ್ಟುವ ಕಟ್ಟಡಗಳನ್ನು ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ನೆಲಸಮ‌ ಮಾಡಲಾಗುವುದು. 30×40 ಅಳತೆಯ ಕಟ್ಟಡಗಳಿಗೆ ಓಸಿ ಸಿಸಿ ವಿನಾಯಿತಿ ನೀಡಲಾಗಿದೆ. ಇದು ತಾತ್ಕಾಲಿಕ ವಿನಾಯಿತಿ. ಹೀಗಾಗಿ ಮುಂದೆ ಎಲ್ಲರೂ ಕಟ್ಟಡ ನಕ್ಷೆ ಅನುಮೋದನೆ ಪಡೆದುಕೊಳ್ಳಿ. ಕಡಿಮೆ ವಿಸ್ತೀರ್ಣದ ನಿವೇಶನದಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚು ಮಹಡಿಗಳನ್ನು ನಿರ್ಮಾಣ‌ ಮಾಡುವುದು, ಸೆಟ್ ಬ್ಯಾಕ್ ಬಿಡದೆ ಒತ್ತೊತ್ತಾಗಿ ಮನೆ ಕಟ್ಟುವುದಕ್ಕೆ ಅವಕಾಶ ನೀಡುವುದಿಲ್ಲ” ಎಂದು ತಿಳಿಸಿದರು.

ಕೆ.ಆರ್ ಪುರಂ ಸಂತೆ ಬೇರೆಡೆಗೆ ಸ್ಥಳಾಂತರದ ಬಗ್ಗೆ ಚರ್ಚಿಸುತ್ತೇವೆ:

“ಆಸ್ಪತ್ರೆ, ಅಕ್ರಮ ಭೂ ಒತ್ತುವರಿ, ಸಂತೆಯ ಸ್ಥಳಾಂತರ, ಸಂಚಾರ ದಟ್ಟಣೆ ನಿವಾರಣೆಗೆ ಮೇಲ್ಸೇತುವೆ, ಪಾದಚಾರಿ ಮೇಲ್ಸೇತುವೆ, ಸಿಸಿಟಿವಿ ಅಳವಡಿಕೆ ವಿಚಾರವಾಗಿ ಸಾರ್ವಜನಿಕರು ಬೇಡಿಕೆ ಇಟ್ಟಿದ್ದಾರೆ. ಈ ಎಲ್ಲಾ ವಿಚಾರಗಳಿಗೂ ನಾವು ಶೀಘ್ರ‌ ಸ್ಪಂದಿಸಲಿದ್ದೇವೆ. ಪಾದಚಾರಿ ಮಾರ್ಗ ಒತ್ತುವರಿ ತಪ್ಪಿಸಲು ರಸ್ತೆ ಬದಿ ವ್ಯಾಪಾರಿಗಳಿಗೆ ತಳ್ಳುವ ಗಾಡಿ ನೀಡಲಾಗಿದೆ. ಶೇ.10-30 ರಷ್ಟು ‌ಹಣ ಪಾವತಿಸಿದರೆ ವಾಹನ‌ ನೀಡುವ ವ್ಯವಸ್ಥೆ ಪಾಲಿಕೆಯಲ್ಲಿದೆ.‌ ನಗರದಲ್ಲಿ ಸುಮಾರು 30 ಸಾವಿರ ರಸ್ತೆ ವ್ಯಾಪಾರಿಗಳಿದ್ದಾರೆ. ಎಲ್ಲೆಲ್ಲಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು ಎಂದು ನಾಗರಿಕರೊಬ್ಬರು ಮನವಿ ನೀಡಿದ್ದಾರೆ.‌‌ ಇವೆಲ್ಲದಕ್ಕೂ ಪ್ರಮುಖ ಆದ್ಯತೆ ನೀಡಿ ಆದಷ್ಟು ‌ಬೇಗ ಬಗೆಹರಿಸಲಾಗುವುದು” ಎಂದು ತಿಳಿಸಿದರು. ‌

“ನಾನು ಈ ಹಿಂದೆ ನಗರಾಭಿವೃದ್ಧಿ ಸಚಿನನಾದ ಕಾಲದಿಂದಲೂ ಈ ಸಂತೆಯನ್ನು ನೋಡಿದ್ದೇನೆ. ಇದು ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ.‌ ಜನಸಂಖ್ಯೆ ‌ಹೆಚ್ಚಳವಾದ ಕಾರಣಕ್ಕೆ ಈಗ ತೊಂದರೆಯಾಗುತ್ತಿದೆ. ಸಂತೆ ನಡೆಯುವ ಜಾಗವನ್ನು ನಾನು ಪರಿಶೀಲನೆ ಮಾಡುತ್ತೇನೆ ಹಾಗೂ ಅದನ್ನು ಎಲ್ಲಿಗೆ ಸ್ಥಳಾಂತರ ಮಾಡಬಹುದು ಎಂಬುದರ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು” ಎಂದು ಭರವಸೆ ನೀಡಿದರು.

ಸಾರ್ವಜನಿಕರಿಗೆ ತೊಂದರೆಯಾಗಿದ್ದರೆ ಕ್ಷಮಿಸಿ:

“ಉದ್ಯಾನ ನಡಿಗೆ ವೇಳೆ ಸಾರ್ವಜನಿಕರಿಂದ ಬಂದ ಅಹವಾಲು, ದೂರನ್ನು ಶೀಘ್ರ ಬಗೆಹರಿಸುತ್ತೇವೆ. ಪಕ್ಷದ ಕಾರ್ಯಕರ್ತರ ಉತ್ಸಾಹದಿಂದ ಸಾರ್ವಜನಿಕರಿಗೆ ತೊಂದರೆಯಾಗಿದ್ದರೆ‌‌ ನಾನು ಕ್ಷಮೆ ಕೇಳುತ್ತೇನೆ. ಕಾರ್ಯಕರ್ತರನ್ನು ನಾನು ಬೇರೆ ಸಂದರ್ಭದಲ್ಲಿ ‌ಭೇಟಿ ಮಾಡುತ್ತೇನೆ. ಈ ಕಾರ್ಯಕ್ರಮದಲ್ಲಿ ಜನರಿಗೆ ಹೆಚ್ಚು ಅವಕಾಶ ಸಿಗಬೇಕು. ಇಂದು ನನ್ನ ಬಳಿ ತಮ್ಮ ಅಹವಾಲು ಹೇಳಿಕೊಳ್ಳಲು ಯಾರಿಗೆ ಸಾಧ್ಯವಾಗಿಲ್ಲವೋ ಅವರು, 1533 ಸಹಾಯವಾಣಿಗೆ ಸಂಪರ್ಕಿಸಿ, ನಿಮ್ಮ ಅಹವಾಲುಗಳನ್ನು ಸಲ್ಲಿಸಬಹುದು” ಎಂದು ತಿಳಿಸಿದರು.

“ಇಲ್ಲಿ ಜನರು ಹೇಳಿಕೊಂಡ ಅಹವಾಲುಗಳನ್ನು ಮಾಧ್ಯಮಗಳು ದಾಖಲಿಸಿಕೊಂಡಿವೆ. ಯಾರೆಲ್ಲಾ ನನ್ನೊಂದಿಗೆ ಸಮಸ್ಯೆ ಹೇಳಿಕೊಂಡಿದ್ದಾರೋ ಅವರ ಅಹವಾಲು ಹಾಗೂ ದೂರವಾಣಿ ಸಂಖ್ಯೆ ದಾಖಲಿಸಿಕೊಂಡಿದ್ದಾರೆ. ನಮ್ಮ ಅಧಿಕಾರಿಗಳು ಈ ಸಮಸ್ಯೆಗಳನ್ನು ಬಗೆಹರಿಸಿ ಅವರಿಗೆ ಮತ್ತೆ ಕರೆ ಮಾಡುತ್ತೇವೆ. ಈ ಸಮಸ್ಯೆಗಳನ್ನು ಹೇಗೆ ಬಗೆಹರಿಸಿದ್ದೇವೆ ಎಂಬ ವಿಚಾರವನ್ನು ನಾವು ತಿಳಿಸುತ್ತೇವೆ. ಕಾನೂನು ಪ್ರಕಾರವಾಗಿರುವುದನ್ನು ನಾವು ಪರಿಹಾರ ನೀಡಿ, ಅಗತ್ಯ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುತ್ತೇವೆ” ಎಂದು ತಿಳಿಸಿದರು.

ಮೆಟ್ರೋ, ಮೇಲ್ಸೇತುವೆ, ರಾಷ್ಟ್ರೀಯ ಹೆದ್ದಾರಿ ಜೊತೆಗೆ ಟನಲ್ ರಸ್ತೆ ಸಂಪರ್ಕ

“ಈ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ನೀಡಲಾಗಿದ್ದು, ಮೇಲ್ಸೇತುವೆ, ಮೆಟ್ರೋ ಸೌಕರ್ಯ ಕಲ್ಪಿಸಲಾಗಿದ್ದು, ಟನಲ್ ರಸ್ತೆಯನ್ನು ಈ ಭಾಗಕ್ಕೆ ಕಲ್ಪಿಸಲಾಗುವುದು. ಈ ಭಾಗದ ಜನರೊಂದಿಗೆ ಹೆಜ್ಜೆ ಹಾಕಿ, ನೂರಾರು ನಿವಾಸಿಗಳ ಜೊತೆ ಚರ್ಚೆ ಮಾಡಿದ್ದೇನೆ. ನಾನು ನೂರಕ್ಕೆ ನೂರರಷ್ಟು ಸರಿಯಲ್ಲದಿರಬಹುದು. ಆದರೆ, ನಾನು ನನ್ನ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಈ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಈ ಭಾಗದ ಶಾಸಕರು, ಮಾಜಿ ಶಾಸಕರು, ಮಾಜಿ ಸಂಸದರು, ಹಿರಿಯ ನಾಯಕರು, ಮಾಜಿ ಕಾರ್ಪೊರೇಟರ್ ಗಳು, ನಿವಾಸಿ ಸಂಘಟನೆಗಳಿಗೆ ಧನ್ಯವಾದ ಸಲ್ಲಿಸುತ್ತೇನೆ. ಅವರ ಸಲಹೆಗಳನ್ನು ಸರ್ಕಾರ ಹಾಗೂ ಜಿಬಿಎ ಪರಿಹಾರ ನೀಡಲು ಬದ್ಧವಾಗಿದೆ” ಎಂದು ತಿಳಿಸಿದರು.

 


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!