ದಾವಣಗೆರೆ:- ಜಿಲ್ಲೆಯ ಹೊನ್ನಾಳಿ ತಾಲೂಕಿನ ಅರಬಘಟ್ಟದಲ್ಲಿ ದಾವಣಗೆರೆ ಪೊಲೀಸರಿಂದ ನಾಲ್ವರು ಅಂತರರಾಜ್ಯ ದರೋಡೆಕೋರರ ಮೇಲೆ ಫೈರಿಂಗ್ ಮಾಡಲಾಗಿದೆ.
ಬ್ಯಾಂಕ್ ದರೋಡೆಗೆ ಯತ್ನಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಪಡೆದು ದಾಳಿ ಮಾಡಿದ ಪೊಲೀಸರು, ಈ ವೇಳೆ ಉತ್ತರ ಪ್ರದೇಶದ ನಾಲ್ವರು ದರೋಡೆಕೋರರನ್ನು ಬಂಧಿಸಿದ್ದಾರೆ.
ದರೋಡೆಕೋರರ ಗ್ಯಾಂಗ್ ಬ್ಯಾಂಕ್ ದರೋಡೆಗೆ ಆಗಮಿಸಿದೆ ಎನ್ನುವ ಖಚಿತ ಮಾಹಿತಿ ಮೇರೆಗೆ ಹೊನ್ನಾಳಿ ಬಳಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ, 7 ಜನ ಹರಿಹರದ ಕಡೆಯಿಂದ ನ್ಯಾಮತಿ ಕಡೆಗೆ ಎರಡು ಕಾರುಗಳಲ್ಲಿ ಹೋಗುತ್ತಿದ್ದರು. ಇವರನ್ನು ಹೊನ್ನಾಳಿ ಬಳಿಯ ಚೆಕ್‍ಪೋಸ್ಟ್‌ನಲ್ಲಿ ಪೊಲೀಸರು ತಡೆಯಲು ಯತ್ನಿಸಿದ್ದಾರೆ. ಈ ವೇಳೆ ಅವರು ಕಾರನ್ನು ನಿಲ್ಲಿಸದೇ ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಾರೆ. ಕಾರನ್ನು ಬೆನ್ನಟ್ಟಿದ ಪೊಲೀಸರು ಅರಬಘಟ್ಟ ಬಳಿ ತಡೆದಿದ್ದಾರೆ. ಆಗ ಅರೋಪಿಗಳು ಪೊಲೀಸರಿಂದ ತಪ್ಪಿಸಿಕೊಳ್ಳಲು ಮುಂದಾಗಿದ್ದಾರೆ. ಅಲ್ಲದೇ ಕಾನ್ಸ್‌ಟೇಬಲ್ ಅನಂದ್ ಅವರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ.
ದರೋಡೆಕೋರರು ದಾಳಿ ನಡೆಸುತ್ತಿದ್ದಂತೆ ಆತ್ಮರಕ್ಷಣೆಗಾಗಿ ಇನ್ಸ್‌ಪೆಕ್ಟರ್ ರವಿಯವರು ಅರೋಪಿ ಗುಡ್ಡು ಅಲಿಯಾನ್ ಗುಡು ಖಾಲಿಯಾ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಅಲ್ಲದೇ ಆತನ ಜೊತೆಗಿದ್ದ ಉತ್ತರ ಪ್ರದೇಶ ಮೂಲದ ಹಸ್ರತ್ ಅಲಿ, ಅಸ್ಲಾಂ ಯಾನೆ ಟನ್ ಟನ್, ಖಮರುದ್ದೀನ್ ಯಾನೆ ಬಾಬು ಸೆರಲಿಯನ್ನು ಬಂಧಿಸಿದ್ದಾರೆ. ಗ್ಯಾಂಗ್‍ನ ನಟೋರಿಯಸ್ ಲೀಡರ್ ರಾಜಾರಾಮ್, ಬಾಬುಷಾ, ಹಾಗೂ ಹಾಪೀಜ್ ಪರಾರಿಯಾಗಿದ್ದಾರೆ. ಪರಾರಿಯಾದ ಅರೋಪಿಗಳ ಬಂಧನಕ್ಕೆ ಎರಡು ತಂಡ ರಚಿಸಲಾಗಿದೆ.



