ಬೆಂಗಳೂರು:- ಚಾಮುಂಡೇಶ್ವರಿ ಶಾಪ ತಗುಲಬಾರದು ಅಂದ್ರೆ ಬಾನು ಮುಷ್ತಾಕ್ ದಸರಾ ಉದ್ಘಾಟನೆ ಕೈಬಿಡಲಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಆ ಹೆಣ್ಣುಮಗಳಿಗೂ ಏನಾದರೂ ಮಾನ-ಮರ್ಯಾದೆ ಬೇಕು. ಮೈಸೂರಿನಲ್ಲಿ ನಡೆಯುವುದು ಎಲ್ಲಾ ಸನಾತನ ಧರ್ಮದ ಸಂಸ್ಕಾರ. ಅಲ್ಲಿ ಭಾನು ಮುಷ್ತಾಕ್ ಅವರಿಗೆ ಏನು ಕೆಲಸ? ಅವರೇನು ಹಿಂದೂನಾ? ಅವರೇನು ಮಾಜಿ ಮುಸ್ಲಿಮರಾ? ಚಾಮುಂಡೇಶ್ವರಿ ಶಾಪ ತಗುಲಬಾರದು ಅಂದರೆ ಅವರೇ ಬಿಟ್ಟು ಬಿಡಬೇಕು ಎಂದರು.
ದಸರಾ ಕೇವಲ ಸಾಂಸ್ಕೃತಿಕ ಕಾರ್ಯಕ್ರಮ ಅಲ್ಲ. ಸನಾತನ ಹಿಂದೂ ಧಾರ್ಮಿಕ ಆಚರಣೆ ಆಧಾರಿತ ಕಾರ್ಯಕ್ರಮ. ಚಾಮುಂಡಿ ದೇವಿಯ ಮೆರವಣಿಗೆಯನ್ನು ಪುಷ್ಪಾರ್ಚನೆ ಮಾಡಿ ಉದ್ಘಾಟಿಸಲಾಗುತ್ತದೆ. ಕನ್ನಡ ಬಾವುಟದ ಬಗ್ಗೆ, ಅರಶಿನ ಕುಂಕುಮದ ಬಗ್ಗೆ ಕೇವಲವಾಗಿ ಮಾತನಾಡಿದವರನ್ನು ದಸರಾ ಉದ್ಘಾಟನೆಗೆ ಆಯ್ಕೆ ಮಾಡಿದ ಸಿಎಂ ಸಿದ್ದರಾಮಯ್ಯ ಸರ್ಕಾರದ ನಡೆ ಸರಿಯಿಲ್ಲ. ಚಾಮುಂಡಿ ತಾಯಿಯ ಶಾಪ ತಟ್ಟಬಾರದು ಅಂದರೆ ಬಾನು ಮುಷ್ತಾಕ್ ಅವರು ದಸರಾ ಉದ್ಘಾಟನೆಯಿಂದ ಹೊರಗುಳಿಯುವುದು ಒಳ್ಳೆಯದು ಎಂದರು.