ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ನವೆಂಬರ್ 25ರಿಂದ ಡಿ. 26ರವರೆಗೆ ಗಜೇಂದ್ರಗಡ ಪಟ್ಟಣದಲ್ಲಿ ಬಸವ ಪುರಾಣ ನಡೆಸಲಾಗುವುದು ಎಂದು ಹಾಲಕೆರೆ ಸಂಸ್ಥಾನಮಠದ ಮುಪ್ಪಿನಬಸವಲಿಂಗ ಶ್ರೀಗಳು ಹೇಳಿದರು.
ಬಸವ ಪುರಾಣ ಹಿನ್ನೆಲೆಯಲ್ಲಿ ಹಾಲಕೆರೆ ಶ್ರೀ ಅನ್ನದಾನೇಶ್ವರ ಸಂಸ್ಥಾನಮಠದ ವತಿಯಿಂದ ಇಲ್ಲಿನ ಜಿ.ಕೆ. ಬಂಡಿ ವಾರ್ಡ್ನಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಶ್ರೀಗಳು ಮಾತನಾಡಿದರು.
ಪಟ್ಟಣದಲ್ಲಿ ಬಸವ ಪುರಾಣ ನಡೆಸಬೇಕು ಎಂದು ಹಿರಿಯ ಶ್ರೀಗಳಾದ ಲಿಂಗೈಕ್ಯ ಡಾ.ಅಭಿನವ ಅನ್ನದಾನ ಮಹಾಸ್ವಾಮಿಗಳ ಕನಸನ್ನು ಸಾಕಾರಾಗೊಳಿಸಲು ಭಕ್ತರೆಲ್ಲರೂ ಮಠದೊಂದಿಗೆ ಕೈಜೋಡಿಸಲು ಮುಂದಾಗಿದ್ದು ಹರ್ಷವನ್ನು ತಂದಿದೆ. ಹೀಗಾಗಿ ಪಟ್ಟಣದಲ್ಲಿ ನವೆಂಬರ್ 25ರಿಂದ ಡಿ. 26ರವೆರೆಗೆ ಬಸವ ಪುರಾಣ ನಡೆಸಲಾಗುವುದು ಎಂದರು.
ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಹಾಲಕೆರೆಯ ಮಠದ ಲಿಂಗೈಕ್ಯ ಡಾ.ಅಭಿನವ ಅನ್ನದಾನ ಮಹಾಸ್ವಾಮಿಗಳು ಬಸವ ತತ್ವ ಪ್ರಚಾರದಲ್ಲಿ ಬಹಳಷ್ಟು ಆಸಕ್ತಿಯನ್ನು ಹೊಂದಿದ್ದರು. ಊರು, ಊರಿಗೆ ತೆರಳಿ ಪೂಜ್ಯರು ಸಂಚಾರಿ ಬಸವ ಪುರಾಣವನ್ನು ನಡೆಸಿದ್ದರು. ಬಸವ ತತ್ವವನ್ನು ನಾವು ಹಾಗೂ ಈ ಭಾಗದಲ್ಲಿ ಅದರಲ್ಲೂ ಯುವ ಸಮೂಹಕ್ಕೆ ತಿಳಿಸುವುದಿದೆ. ಹಾಲಕೆರೆ ಮಠದ ಪ್ರತಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿದ ಸಾರ್ಥಕ ಭಾವನೆ ಭಕ್ತರು, ನಮ್ಮದಾಗಿದೆ ಎಂದರು.
ಮುಖಂಡ ಬಸವರಾಜ ಕೊಟಗಿ, ಬಸವಣ್ಣ ಹಾಗೂ ಶರಣರ ಆಶಯಗಳಾದ ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯದ ಪ್ರಾಮುಖ್ಯತೆ ಬಸವ ಪುರಾಣದಲ್ಲಿ ಪ್ರಸ್ತಾಪವಿರಲಿ ಎಂದರು. ಗುಡೂರು ಗ್ರಾಮದ ಅನ್ನದಾನ ಶಾಸ್ತ್ರಿಗಳು ಹಾಗೂ ಎಫ್.ಎನ್. ಹುಡೇದ ಮಾತನಾಡಿದರು.
ಈ ಸಂದರ್ಭದಲ್ಲಿ ಸಂಗನಾಳ ವಿಶ್ವವೇಶ್ವರ ದೇವರು, ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿ, ಗಜೇಂದ್ರಗಡ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಸಿದ್ದಪ್ಪ ಬಂಡಿ, ಮಲ್ಲಣ್ಣ ಕೋಮಾರಿ, ಚಂದ್ರಪ್ಪ ಗುಡದೂರ ಹಾಗೂ ಬಸವರಾಜ ಮೂಲಿಮನಿ, ಎ.ಪಿ. ಗಾಣಿಗೇರ, ಪ್ರಭು ಚವಡಿ, ಶೇಖರಯ್ಯ ಹಿರೇಮಠ, ಎನ್.ಆರ್. ಗೌಡರ, ವೀರಣ್ಣ ಶೆಟ್ಟರ, ವೀರಪ್ಪ ಪಟ್ಟಣಶೆಟ್ಟಿ, ಗುರುನಗೌಡರ ನಾಗೂರ, ಮಲ್ಲಣ್ಣ ಯಲಿಗಾರ, ಶಂಕ್ರಯ್ಯ ಮೇಟಿಮಠ, ಗೀರಶಗೌಡ್ರ ಮುಲ್ಕಿಪಾಟೀಲ, ರಾಜು ಸಾಂಗ್ಲಿಕರ, ಬಸಪ್ಪ ಅಕ್ಕಿ, ಕೆ.ಕೆ. ಬಾಗವಾನ, ವಿರಣ್ಣ ಹಳ್ಳಿ, ಮಾಹಾಂತೇಶ ಹಿರೇಮಠ ಮುಂತಾದವರಿದ್ದರು.
ಪಟ್ಟಣದಲ್ಲಿ ನಡೆಯುವ ಬಸವ ಪುರಾಣ ಕಾರ್ಯಕ್ರಮದ ಪೂರ್ವಭಾವಿ ಸಭೆಗೆ ಶ್ರೀಗಳು ನೀಡಿದ ಕರೆಗೆ ಪಟ್ಟಣ ಸೇರಿ ಸುತ್ತಲಿನ 80ಕ್ಕೂ ಅಧಿಕ ಗ್ರಾಮಗಳ ಭಕ್ತರು ಆಗಮಿಸಿದ್ದಾರೆ. ಪಟ್ಟಣದಲ್ಲಿ ನಡೆಯುವ ಬಸವ ಪುರಾಣವು ಸರಳ ಪುರಾಣವಲ್ಲ. ಸಾಮಾಜಿಕ ನ್ಯಾಯ ಹಾಗೂ ಶಿಕ್ಷಣಕ್ಕೆ ಒತ್ತು ನೀಡಿದ ಜಗಜ್ಯೋತಿ ಬಸವೇಶ್ವರರು ಹಾಗೂ ಶರಣರ ಆಶಯಗಳನ್ನು ತಿಳಿಸುವ ಕಾಂತ್ರಿಕಾರಿ ಪುರಾಣವಾಗಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಅಭಿಪ್ರಾಯಪಟ್ಟರು.