ಬಿಗ್ ಬಾಸ್ ಸೀಸನ್ 11 ರಲ್ಲಿ ಸ್ಟ್ರಾಂಗ್ ಕಂಟಸ್ಟಂಟ್ ಎಂದು ಹೇಳಲಾಗುತ್ತಿದ್ದ ಅನುಷಾ ರೈ ಅವರು 50 ದಿನಕ್ಕೆ ತಮ್ಮ ಆಟವನ್ನು ಮುಗಿಸಿ ಬಿಗ್ ಬಾಸ್ ಮನೆಯಿಂದ ಆಚೆ ಬಂದಿದ್ದಾರೆ.
ಟಾಸ್ಕ್ ಅಂತ ಬಂದಾಗ ಬೇರೆ ಸ್ಪರ್ಧಿಗಳಿಗೆ ಸೆಡ್ಡು ಹೊಡೆದು ಅನುಷಾ ಆಟ ಆಡುತ್ತಿದ್ದರು. ಅದರೊಂದಿಗೆ ಧರ್ಮ ಅವರ ಜೊತೆಗಿನ ಸ್ನೇಹದ ವಿಚಾರ ನಟಿ ಹೈಲೈಟ್ ಆಗಿದ್ದರು.
ಬಿಗ್ ಬಾಸ್ ಶೋಗೆ ಬರುವುದಕ್ಕೂ ಮುನ್ನ ಧರ್ಮ ಕೀರ್ತಿರಾಜ್ ಮತ್ತು ಅನುಷಾ ರೈ ಅವರು ಪರಿಚಿತರಾಗಿದ್ದರು. ಒಟ್ಟಿಗೆ ಸಿನಿಮಾಗಳಲ್ಲಿ ಕೆಲಸ ಮಾಡಿದ್ದರು. ಬಿಗ್ ಬಾಸ್ ಶೋಗೆ ಬರುವಾಗ ಅವರು ಜೋಡಿಯಾಗಿ ಬಂದಿದ್ದರು. ಮನೆಯ ಒಳಗೆ ಕೂಡ ಒಟ್ಟಿಗೆ ಇರುತ್ತಿದ್ದರು. ಕಾಕತಾಳೀಯ ಎಂದರೆ ಎಲಿಮಿನೇಷನ್ ಪ್ರಕ್ರಿಯೆಯಲ್ಲೂ ಅವರು ಜೊತೆಯಲ್ಲಿ ಕೊನೇ ಹಂತ ತಲುಪಿದ್ದರು.
ಧರ್ಮ ಮತ್ತು ಅನುಷಾ ಇಬ್ಬರೂ ಎಲಿಮಿನೇಟ್ ಆಗಬಹುದು ಅಥವಾ ಒಬ್ಬರೇ ಎಲಿಮಿನೇಟ್ ಆಗಬಹುದು ಎಂದು ಸುದೀಪ್ ಹೇಳಿದಾಗ ಅವರಿಬ್ಬರನ್ನು ಇಷ್ಟಪಡುವ ಪ್ರೇಕ್ಷಕರ ಎದೆಯಲ್ಲಿ ಢವ ಢವ ಶುರುವಾಗಿತ್ತು. ಅಂತಿಮವಾಗಿ ಅನುಷಾ ರೈ ಅವರು ಔಟ್ ಆಗಬೇಕಾಯಿತು. ಧರ್ಮ ಕೀರ್ತಿರಾಜ್ ಅವರು ಅಳುತ್ತಾ ವಾಪಸ್ ಬಿಗ್ ಬಾಸ್ ಮನೆಯೊಳಗೆ ಹೋಗಿದ್ದಾರೆ.



