ಬೆಂಗಳೂರು: ನಗರದಲ್ಲಿ ಸಾರ್ವಜನಿಕವಾಗಿ ಕಸ ಸುಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಉದ್ದೇಶದಿಂದ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ (BBMP) ಹೊಸ ನಿಯಮವನ್ನು ಜಾರಿಗೊಳಿಸಿದೆ. ಇನ್ಮುಂದೆ ನಗರದಲ್ಲಿ ಎಲ್ಲೆಂದರಲ್ಲಿ ಕಸ ಸುಟ್ಟರೆ ₹1 ಲಕ್ಷ ರೂ. ದಂಡ ಮತ್ತು ಗರಿಷ್ಠ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಇಲಾಖೆಯವರು ತಿಳಿಸಿದ್ದಾರೆ.
ಇದಕ್ಕೂ ಮೊದಲು, ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆದವರ ಮನೆ ಮುಂದೆ ಕಸ ಸುರಿಸುವ ಮೂಲಕ BBMP ದಂಡ ವಿಧಿಸುವ ಕ್ರಮ ಅನುಸರಿಸುತ್ತಿತ್ತು. ಆದರೆ ಕಸ ಸುಡುವುದರಿಂದ ಉಂಟಾಗುವ ಗಂಭೀರ ವಾಯುಮಾಲಿನ್ಯ ಗಮನದಲ್ಲಿಟ್ಟುಕೊಂಡು, ಪರಿಸರ ಸಂರಕ್ಷಣಾ ಕಾಯ್ದೆಯಡಿ ಈ ಕಠಿಣ ನಿಯಮ ಜಾರಿಗೆ ತರಲಾಗಿದೆ.
ಘನತ್ಯಾಜ್ಯ ನಿರ್ವಹಣಾ ಇಲಾಖೆ ಸಾರ್ವಜನಿಕರಿಗೆ ಮನವಿ ಮಾಡಿದ್ದು, ನಗರದಲ್ಲಿ ಯಾರಾದರೂ ಕಸ ಸುಡುತ್ತಿರುವುದು ಕಂಡುಬಂದರೆ ಅದರ ವಿಡಿಯೋ ಅಥವಾ ಮಾಹಿತಿ ಹಂಚಿಕೊಳ್ಳುವಂತೆ ಕರೆ ನೀಡಲಾಗಿದೆ. ನಗರದಲ್ಲಿ ಸಂಗ್ರಹವಾಗುವ ಕಸವನ್ನು ಸಂಸ್ಕರಣ ಘಟಕಗಳಿಗೆ ಕಳುಹಿಸಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದ್ದು,
ಕಸ ಸುಡುವುದು ಪರಿಸರಕ್ಕೆ ಮಾತ್ರವಲ್ಲ, ಸಂಪನ್ಮೂಲ ನಾಶಕ್ಕೂ ಕಾರಣವಾಗುತ್ತದೆ ಎಂದು BBMP ತಿಳಿಸಿದೆ. ಹೊಸ ನಿಯಮ ಉಲ್ಲಂಘಿಸಿದರೆ ಸದರಿ ವ್ಯಕ್ತಿಗಳಿಗೆ ಕಠಿಣ ದಂಡ ಮತ್ತು ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಸಿದೆ.



